ಐವರ್ಮೆಕ್ಟಿನ್ ಔಷಧಿಯ ಮಾರ್ಗಸೂಚಿ ಕುರಿತು ಡಬ್ಲ್ಯುಎಚ್ಒ ಮುಖ್ಯ ವಿಜ್ಞಾನಿಗೆ ಭಾರತೀಯ ಬಾರ್ ಅಸೋಸಿಯೇಷನ್ ನೋಟಿಸ್

photo : twitter(@doctorsoumya)
ಹೊಸದಿಲ್ಲಿ,ಜೂ.12: ಕೋವಿಡ್ ರೋಗಿಗಳ ಚಿಕಿತ್ಸೆಯಲ್ಲಿ ಜನಪ್ರಿಯ ಆ್ಯಂಟಿ ಪ್ಯಾರಾಸೈಟಿಕ್ ಔಷಧಿಯಾಗಿರುವ ಐವರ್ಮೆಕ್ಟಿನ್ ವಿರುದ್ಧ ಸಾರ್ವಜನಿಕರಿಗೆ ಪ್ರಚೋದನೆ ಮತ್ತು ತಪ್ಪು ಮಾಹಿತಿಯ ಅಭಿಯಾನಕ್ಕಾಗಿ ಇಂಡಿಯನ್ ಬಾರ್ ಅಸೀಷಿಯೇಷನ್ (ಐಬಿಎ) ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ)ಯ ಮುಖ್ಯ ವಿಜ್ಞಾನಿ ಡಾ.ಸೌಮ್ಯಾ ಸ್ವಾಮಿನಾಥನ್ ಅವರಿಗೆ ಕಾನೂನು ನೋಟಿಸನ್ನು ಜಾರಿಗೊಳಿಸಿದೆ.
ಕ್ಲಿನಿಕಲ್ ಟ್ರಯಲ್ ನ ಮಿತಿಯನ್ನು ಹೊರತುಪಡಿಸಿ ಕೋವಿಡ್ ಚಿಕಿತ್ಸೆಗಾಗಿ ಐವರ್ಮೆಕ್ಟಿನ್ ಬಳಕೆಯನ್ನು ಡಬ್ಲ್ಯುಎಚ್ಒ ಶಿಫಾರಸು ಮಾಡಿಲ್ಲ ಎಂಬ ಟ್ವಿಟರ್ ಪೋಸ್ಟ್ ಸೇರಿದಂತೆ ಸ್ವಾಮಿನಾಥನ್ ಅವರ ಹೇಳಿಕೆಗಳಿಗೆ ಸಂಬಂಧಿಸಿದಂತೆ ಮುಂಬೈನಲ್ಲಿ ಕೇಂದ್ರ ಕಚೇರಿ ಹೊಂದಿರುವ ಖಾಸಗಿ ಬಾರ್ ಅಸೋಸಿಯೇಷನ್ ಆಗಿರುವ ಐಬಿಎ ಮೇ 25ರಂದು 51 ಪುಟಗಳ ಈ ನೋಟಿಸನ್ನು ಕಳುಹಿಸಿದೆ. ಔಷಧಿಯು ಕಾಯಿಲೆಯ ಬೆಳವಣಿಗೆಯನ್ನು ತಡೆಯುತ್ತದೆ ಎನ್ನುವುದಕ್ಕೆ ಯಾವುದೇ ಪುರಾವೆಯಿಲ್ಲ ಎಂದೂ ಸ್ವಾಮಿನಾಥನ್ ಹೇಳಿದ್ದರು.
ಐಪಿಸಿಯ ಕಲಂ 302,304(2),88,120(ಬಿ) ಮತ್ತು 34 ಹಾಗೂ ವಿಪತ್ತು ನಿರ್ವಹಣಾ ಕಾಯ್ದೆಯಡಿ ಸ್ವಾಮಿನಾಥನ್ ವಿರುದ್ಧ ಕ್ರಮ ಜರುಗಿಸುವಂತೆ ಐಬಿಎ ಕರೆನೀಡಿದೆ.
'ಕಾನೂನು ನೋಟಿಸ್ ಮೊದಲ ಹೆಜ್ಜೆಯಾಗಿದೆಯಷ್ಟೇ. ನಾವು ನಮ್ಮ ಕಾನೂನು ಸಮರವನ್ನು ಇನ್ನಷ್ಟು ಮುಂದುವರಿಸುತ್ತೇವೆ. ಐವರ್ಮೆಕ್ಟಿನ್ ಬಳಕೆಯನ್ನು ತಡೆಯಲು ಕೆಲವು ಶಕ್ತಿಗಳು ಪ್ರಯತ್ನಿಸುತ್ತಿವೆ 'ಎಂದು ಐಬಿಎದ ಕಾನೂನು ಘಟಕದ ಮುಖ್ಯಸ್ಥೆ ದೀಪಾಲಿ ಓಝಾ ತಿಳಿಸಿದರು.