ಉಡುಪಿ ಜಿಲ್ಲೆಯಾದ್ಯಂತ ಭಾರೀ ಗಾಳಿ ಮಳೆ: ಧರೆಗೆ ಉರುಳಿದ ಮರ, ವಿದ್ಯುತ್ ಕಂಬಗಳು

ಉಡುಪಿ, ಮೇ 12: ಜಿಲ್ಲೆಯಾದ್ಯಂತ ಶನಿವಾರ ಗಾಳಿ ಮಳೆಯಾಗಿದ್ದು ವಿವಿಧೆಡೆಯಲ್ಲಿ ಮನೆ ಹಾಗೂ ವಿದ್ಯುತ್ ಕಂಬಗಳಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.
ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಮುಂದಿನ 4 ದಿನವೂ ಭಾರೀ ಮಳೆಯಾಗಲಿದೆ. ಕಳೆದ 24 ಗಂಟೆ ಅವಧಿಯಲ್ಲಿ ಉಡುಪಿ ತಾಲೂಕಿನಲ್ಲಿ 37.9 ಮಿ.ಮೀ , ಕಾರ್ಕಳ 38.2 ಮಿ.ಮೀ., ಬ್ರಹ್ಮಾವರ 52.1 ಮಿ.ಮೀ., ಕಾಪು 15.7 ಮಿ.ಮೀ., ಕುಂದಾಪುರ 42.8ಮಿ.ಮೀ., ಬೈಂದೂರು 59.9ಮಿ.ಮೀ., ಹೆಬ್ರಿ 65.3 ಮಿ.ಮೀ. ಮಳೆಯಾಗಿದ್ದು ಜಿಲ್ಲೆಯಾದ್ಯಂತ ಒಟ್ಟು 46.6 ಮಿ.ಮೀ. ಸರಾಸರಿ ಮಳೆಯಾಗಿದೆ.
ಇಂದು ಮುಂಜಾನೆಯಿಂದ ಮಧ್ಯಾಹ್ನದವರೆಗೆ ನಿರಂತವಾಗಿ ಗಾಳಿ ಮಳೆ ಯಾಗಿದ್ದು, ನಂತರ ಬಿಸಿಲಿನ ವಾತಾವರಣ ಕಂಡು ಬಂದಿತ್ತು. ಸಂಜೆ ವೇಳೆ ನಗರ ಸೇರಿ ದಂತೆ ಹಲವೆಡೆ ಭಾರೀ ಗಾಳಿಮಳೆಯಾಗಿರುವುದು ವರದಿಯಾಗಿದೆ. ಮಳೆಯಿಂದಾಗಿ ಜಿಲ್ಲೆಯಾದ್ಯಂತ ಜನಸಂಚಾರ ವಿರಳವಾಗಿತ್ತು. ಕೆಲವು ಕಡೆ ಸಾರ್ವಜನಿಕರು ಅಗತ್ಯ ವಸ್ತುಗಳ ಖರೀದಿಗೆ ಅಡ್ಡಿಯಾಯಿತು. ಚೆಕ್‌ಪೋಸ್ಟ್ ಗಳಲ್ಲಿ ಪೊಲೀಸರು ಮಳೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ಕಂಡುಬಂತು.
ಗಾಳಿ ಮಳೆಯಿಂದಾಗಿ ನಗರದ ಅಲಂಕಾರ್ ಥಿಯೇಟರ್ ಹಿಂಬದಿ ರಸ್ತೆಯ ಪ್ರಸಾದ್ ನೇತ್ರಾಲಯ ಸಮೀಪ ವಿದ್ಯುತ್ ಕಂಬ ಹಾಗೂ ಮರವೊಂದು ಧರೆಗೆ ಉರುಳಿ ಬಿದ್ದಿದೆ. ಜಿಲ್ಲೆಯಾದ್ಯಂತ ವಿವಿಧ ಕಡೆಯಲ್ಲಿ ವಿದ್ಯುತ್ ಕಂಬ, ಟ್ರಾನ್ಸ್ ಫಾರ್ಮರ್, ವಿದ್ಯುತ್ ತಂತಿಗಳು ನೆಲಕ್ಕೆ ಉರುಳಿವೆ. ಇದರಿಂದಾಗಿ ವಿವಿಧ ಕಡೆಗಳಲ್ಲಿ ಮುಂಜಾನೆಯಿಂದ ವಿದ್ಯುತ್ ವ್ಯತ್ಯಯ ಉಂಟಾಗಿದೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.







