ಲಸಿಕೆಯ 1.29 ಕೋಟಿ ಡೋಸ್ ಪಡೆದ ಖಾಸಗಿ ಆಸ್ಪತ್ರೆಗಳು ಮೇ ತಿಂಗಳಲ್ಲಿ ಬಳಸಿದ್ದು ಕೇವಲ 22 ಲಕ್ಷ ಮಾತ್ರ
ಕೇಂದ್ರ ಸರಕಾರದ ದತ್ತಾಂಶದಲ್ಲಿ ಬಹಿರಂಗ

ಹೊಸದಿಲ್ಲಿ, ಜೂ. 12: ದೇಶಾದ್ಯಂತ ಲಸಿಕೆಯ ಕೊರತೆ ವರದಿಯಾಗುತ್ತಿರುವ ಸಂದರ್ಭ, ಕಳೆದ ತಿಂಗಳು ಖಾಸಗಿ ಆಸ್ಪತ್ರೆಗಳಲ್ಲಿ ಕೇವಲ ಶೇ. 17 ಡೋಸ್ಗಳು ಮಾತ್ರ ಬಳಕೆಯಾಗಿವೆ ಎಂದು ಕೇಂದ್ರ ಸರಕಾರದ ದತ್ತಾಂಶ ಬಹಿರಂಗಪಡಿಸಿದೆ. ಮೇಯಲ್ಲಿ ದೇಶಾದ್ಯಂತ ಒಟ್ಟು 7.4 ಕೋಟಿ ಡೋಸ್ ಗಳು ಲಭ್ಯವಿತ್ತು. ಇದರಲ್ಲಿ 1.85 ಕೋಟಿ ಡೋಸ್ ಗಳು ಖಾಸಗಿ ಆಸ್ಪತ್ರೆಗಳಿಗೆ ಮೀಸಲಿರಿಸಲಾಗಿತ್ತು ಎಂದು ಆರೋಗ್ಯ ಸಚಿವಾಲಯದ ಜೂನ್ 4ರ ಪತ್ರಿಕಾ ಹೇಳಿಕೆ ತಿಳಿಸಿದೆ.
ದೇಶಾದ್ಯಂತದ ಖಾಸಗಿ ಆಸ್ಪತ್ರೆಗಳು ಲಸಿಕೆಯ ಲಭ್ಯವಿದ್ಧ 1.85 ಕೋಟಿ ಡೋಸ್ಗಳಲ್ಲಿ 1.29 ಕೋಟಿ ಡೋಸ್ಗಳನ್ನು ಖರೀದಿಸಿವೆ. ಅದರೆ, ಈ ಆಸ್ಪತ್ರೆಗಳು ಕೇವಲ 22 ಲಕ್ಷ ಡೋಸ್ಗಳನ್ನು ಮಾತ್ರ ಬಳಕೆ ಮಾಡಿವೆ ಎಂದು ಕೇಂದ್ರ ಸರಕಾರದ ದತ್ತಾಂಶ ತಿಳಿಸಿದೆ. ಸರಕಾರಿ ಆಸ್ಪತ್ರೆಗಳಿಗೆ ಹೋಲಿಸಿದರೆ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಯ ಡೋಸ್ ಗೆ ಅತ್ಯಧಿಕ ಬೆಲೆ ಹಾಗೂ ಲಸಿಕೆ ಕುರಿತು ಹಿಂಜರಿಕೆಯಿಂದ ಜನರು ಲಸಿಕೆ ಹಾಕಿಸಿಕೊಳ್ಳುವುದರಿಂದ ದೂರ ಇರುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ.
‘‘ಖಾಸಗಿ ಆಸ್ಪತ್ರೆಗಳಿಗೆ ಶೇ. 25 ಡೋಸ್ಗಳನ್ನು ಹಂಚಿಕೆ ಮಾಡಲಾಗಿದೆ. ಆದರೆ, ಅವು ಒಟ್ಟು ಡೋಸ್ ನ ಕೇವಲ ಶೇ. 7.5 ಎಂದು ಕೆಲವು ಮಾಧ್ಯಮ ವರದಿಗಳು ಉಲ್ಲೇಖಿಸಿವೆ. ಆದರೆ, ಈ ವರದಿ ನಿಖರವಾದುದು ಅಲ್ಲ. ಲಭ್ಯವಿರುವ ದತ್ತಾಂಶಕ್ಕೆ ಇದು ಹೊಂದಿಕೆಯಾಗುವುದಿಲ್ಲ’’ ಎಂದು ಕೇಂದ್ರ ಸರಕಾರದ ಹೇಳಿಕೆ ತಿಳಿಸಿದೆ. ಕೇಂದ್ರ ಸರಕಾರ ಲಾಭ ಮಾಡಿಕೊಳ್ಳುತ್ತಿದೆ ಎಂದು ಪ್ರತಿಪಕ್ಷಗಳ ಆರೋಪಗಳ ನಡುವೆ ಕಳೆದ ತಿಂಗಳು ಕೇಂದ್ರ ಸರಕಾರ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆಯ ಗರಿಷ್ಠ ದರವನ್ನು ನಿಗದಿಪಡಿಸಿತ್ತು.