ಮಂಗಳೂರು ವಿವಿ ಆವರಣದಲ್ಲಿ ವಿದೇಶಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಿರ್ಮಾಣ

ಮಂಗಳೂರು, ಜೂ.13: ನಗರ ಹೊರವಲಯದ ಕೊಣಾಜೆಯ ಮಂಗಳಗಂಗೋತ್ರಿಯಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ವಿದೇಶಿ ವಿದ್ಯಾರ್ಥಿಗಳಿಗೆ ನಿರ್ಮಾಣಗೊಳ್ಳುತ್ತಿರುವ ವಸತಿ ನಿಲಯದ ಕಾಮಗಾರಿ ಭಾಗಶಃ ಪೂರ್ಣಗೊಂಡಿದ್ದು, ವಿದ್ಯಾರ್ಥಿಗಳ ವಾಸಕ್ಕೆ ಸಿದ್ಧಗೊಂಡಿವೆ.
ಅಪಘಾನಿಸ್ತಾನ, ಚೀನಾ, ಶ್ರೀಲಂಕಾ, ಇಂಡೋನೇಶಿಯಾ, ಇರಾನ್, ದಕ್ಷಿಣ ಆಫ್ರಿಕಾ, ನೇಪಾಲ ಸಹಿತ ಸುಮಾರು 29 ದೇಶಗಳ 140 ವಿದ್ಯಾರ್ಥಿಗಳು ಮಂಗಳೂರು ವಿವಿ ಆವರಣದಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷಕ್ಕೆ (2021-22) ಸುಮಾರು 220 ವಿದೇಶಿ ವಿದ್ಯಾರ್ಥಿಗಳು ದಾಖಲಾತಿಗಾಗಿ ವಿವಿಯಿಂದ ಅರ್ಜಿ ಸ್ವೀಕರಿಸಿದ್ದಾರೆ.
ಅಂದಹಾಗೆ ಮಂಗಳೂರು ವಿವಿಯಲ್ಲಿರುವ ವಿದೇಶಿ ವಿದ್ಯಾರ್ಥಿಗಳಿಗೆ ಸುಸಜ್ಜಿತವಾದ ಪ್ರತ್ಯೇಕ ವಸತಿ ನಿಲಯವಿಲ್ಲ. ದೇರಳಕಟ್ಟೆಯಲ್ಲಿರುವ ಬಾಡಿಗೆ ಕಟ್ಟಡವೊಂದರಲ್ಲಿ ವಿದೇಶಿ ವಿದ್ಯಾರ್ಥಿಗಳು ವಾಸವಾಗಿದ್ದಾರೆ. ವಿದೇಶಿ ವಿದ್ಯಾರ್ಥಿಗಳು ವಿವಿ ಆವರಣದಲ್ಲೇ ವಾಸ್ತವ್ಯ ಹೂಡಿದರೆ ವಿದ್ಯಾರ್ಥಿಗಳಿಗೆ ಅನುಕೂಲ ಮತ್ತು ವಿವಿ ಆಡಳಿತಕ್ಕೆ ಈ ವಿದ್ಯಾರ್ಥಿಗಳ ಮೇಲ್ನೋಟವೂ ಸುಲಭ ಸಾಧ್ಯ ಎಂದು ಮನಗಂಡು ವಿವಿ ಆವರಣದಲ್ಲೇ ಅಂತಾರಾಷ್ಟ್ರೀಯ ವಸತಿ ನಿಲಯ ನಿರ್ಮಿಸಲಾಗುತ್ತಿದೆ. ಈ ಹಾಸ್ಟೆಲ್‌ನಲ್ಲಿ ಅಂತಾರಾಷ್ಟ್ರೀಯ ದರ್ಜೆಯ ವ್ಯವಸ್ಥೆಗಳು ಇರಲಿವೆ.
ಬಹುಕೋಟಿ ವೆಚ್ಚದ ಈ ಹಾಸ್ಟೆಲ್ ನಿರ್ಮಾಣದ ಕಾಮಗಾರಿಯನ್ನು 5 ವರ್ಷದ ಹಿಂದೆ ಆರಂಭಿಸಲಾಗಿತ್ತು. ಆದರೆ ಸರಕಾರದ ಅನುಮೋದನೆ ಸಿಕ್ಕಿರಲಿಲ್ಲ. ವಸತಿ ನಿಲಯದ ಕಾಮಗಾರಿ ಆರಂಭಿಸಿದ್ದರಿಂದ ವಿವಿಯಿಂದಲೇ ಹಣ ವಿನಿಯೋಗಿಸಲಾಗಿತ್ತು. ನಿಗದಿತ ಅನುದಾನ ಮತ್ತು ಸರಕಾರದ ಒಪ್ಪಿಗೆ ಪಡೆಯುವ ಅಗತ್ಯವಿದ್ದ ಕಾರಣ ವಿವಿಯ ಪ್ರಸಕ್ತ ಆಡಳಿತ ಮಂಡಳಿಯು ಘಟನೋತ್ತರ ಒಪ್ಪಿಗೆ ನೀಡುವಂತೆ ಸರಕಾರವನ್ನು ಕೋರಿತ್ತು. ಅದರಂತೆ ರಾಜ್ಯ ಸರಕಾರದ ಸಚಿವ ಸಂಪುಟ ಸಭೆಯು ಒಪ್ಪಿಗೆ ಸೂಚಿಸಿದೆ.
ವಸತಿ ನಿಲಯ ವ್ಯಾಪ್ತಿಯ ಇತರ ಬ್ಲಾಕ್‌ಗಳನ್ನು ಪರೀಕ್ಷಾ ಬ್ಲಾಕ್, ವಿವಿಐಪಿ ಗೆಸ್ಟ್ ಹೌಸ್‌ಗೆ ಬಳಕೆ ಮಾಡಲು ಚಿಂತನೆ ನಡೆಸಲಾಗಿದೆ. ಅಲ್ಲದೆ ವಿವಿಯಲ್ಲಿರುವ ಇತರ ಕೆಲವು ವಿಭಾಗಗಳನ್ನು ಮತ್ತೊಂದು ಬ್ಲಾಕ್‌ಗೆ ಸ್ಥಳಾಂತರಿಸುವ ಬಗ್ಗೆಯೂ ಮಾತುಕತೆ ನಡೆಯುತ್ತಿದೆ ಎಂದು ವಿವಿ ಮೂಲಗಳು ತಿಳಿಸಿವೆ.
ಸುಸಜ್ಜಿತ ‘ಪರೀಕ್ಷಾ ಭವನ
ರಾಜ್ಯದ ಎಲ್ಲಾ ವಿವಿ ವ್ಯಾಪ್ತಿಯಲ್ಲಿ ಪರೀಕ್ಷಾ ಭವನವು ಪ್ರತ್ಯೇಕವಾಗಿದೆ. ಆದರೆ ಮಂಗಳೂರು ವಿವಿಯಲ್ಲಿ ಪರೀಕ್ಷಾ ಭವನ ಪ್ರತ್ಯೇಕವಾಗಿಲ್ಲ. ವಿವಿಯ ಆಡಳಿತ ಸೌಧದ ಕೆಳಗಿನ ಮಹಡಿಯಲ್ಲಿ ಪರೀಕ್ಷಾ ಕಾರ್ಯಚಟುವಟಿಕೆಗಳು ನಡೆಯುತ್ತಿದೆ. ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗಕ್ಕೆ ಇದರಿಂದ ಸಮಸ್ಯೆಯಾಗುವುದನ್ನು ಮನಗಂಡ ವಿವಿ ಆಡಳಿತವು ಸುಸಜ್ಜಿತ ಪರೀಕ್ಷಾ ಭವನ ಮಾಡಲು ನಿರ್ಧರಿಸಿತ್ತು. ಅದರಂತೆ ಸದ್ಯ ನಿರ್ಮಾಣ ಹಂತದಲ್ಲಿರುವ ಅಂತಾರಾಷ್ಟ್ರೀಯ ವಸತಿ ನಿಲಯದ ಪಕ್ಕದ ಬ್ಲಾಕ್ ಒಂದನ್ನು ‘ಪರೀಕ್ಷಾ ಭವನ’ಕ್ಕೆ ಮೀಸಲಿಡಲು ಮುಂದಾಗಿದೆ.
ಕಾಮಗಾರಿ ಶೀಘ್ರ ಪೂರ್ಣ
ಮಂಗಳೂರು ವಿವಿ ಆವರಣದಲ್ಲಿ ಅಂತಾರಾಷ್ಟ್ರೀಯ ವಸತಿ ನಿಲಯ ಕಟ್ಟಡ ನಿರ್ಮಾಣ ಯೋಜನೆಯು ಅಂತಿಮ ಹಂತದಲ್ಲಿದೆ. ಕೊರೋನ ಸಮಸ್ಯೆಯಿಂದಾಗಿ ಕಾಮಗಾರಿಗೆ ಸ್ವಲ್ಪ ಹಿನ್ನೆಡೆಯಾಗಿದೆ. ಆದಾಗ್ಯೂ ಶೀಘ್ರ ಇದರ ಕಾಮಗಾರಿ ಪೂರ್ಣಗೊಳಿಸಿ ವಿದ್ಯಾರ್ಥಿಗಳ ವಸತಿಗೆ ವ್ಯವಸ್ಥೆ ಕಲ್ಪಿಸಲಾಗುವುದು.
- ಪ್ರೊ ಪಿ.ಎಸ್.ಯಡಪಡಿತ್ತಾಯ, ಕುಲಪತಿ, ಮಂಗಳೂರು ವಿವಿ







