ಮಂಗಳೂರು ವಿವಿ ಸಂಧ್ಯಾ ಕಾಲೇಜಿನಲ್ಲಿ ‘ಧರೆಯ ಮೊರೆ’ ವೆಬಿನಾರ್
ಮಂಗಳೂರು, ಜೂ.13: ಮಂಗಳೂರು ವಿವಿ ಸಂಧ್ಯಾ ಕಾಲೇಜು ಮಂಗಳೂರು ಇದರ ಲಲಿತ ಕಲಾ ಮತ್ತು ಸಾಹಿತ್ಯ ಸಂಘದ ವತಿಯಿಂದ ವಿಶ್ವ ಪರಿಸರ ದಿನದ ಅಂಗವಾಗಿ ‘ಧರೆಯ ಮೊರೆ’ ಎಂಬ ವಿಷಯದಲ್ಲಿ ವೆಬಿನಾರ್ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ ಮೋಹನ್ ಪಡಿವಾಳ್ ನೀರನ್ನು ಅನಗತ್ಯ ವೆಚ್ಚ ಮಾಡದೆ ಮಳೆಕೊಯ್ಲು ಮಾಡುವ ಮೂಲಕ ಅಂತರ್ಜಲ ಮಟ್ಟವನ್ನು ಹೆಚ್ಚಿಸಬೇಕು. ಗಿಡಮರಗಳನ್ನು ನೆಟ್ಟು ಬೆಳೆಸುವ ಮೂಲಕ ಪರಿಸರ ಮಾಲಿನ್ಯವನ್ನು ಕಡಿಮೆ ಮಾಡಿ ಧರೆಯುಳಿಸುವ ಜವಾಬ್ದಾರಿ ಯುವಜನತೆಯ ಮೇಲಿದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದ ಪರಿಸರವಾದಿ ದಿನೇಶ್ ಹೊಳ್ಳ ಮನುಷ್ಯ ತನ್ನ ದುರಾಸೆಯಿಂದ ಪ್ರಕೃತಿಯಲ್ಲಿ ನಡೆಯುವ ಎಲ್ಲ ದುರಂತ ಗಳಿಗೆ ಕಾರಣನಾಗಿದ್ದಾನೆ. ಇದಕ್ಕೆ ಪರಿಹಾರವಾಗಿ ನಾವು ಹೆಚ್ಚು ಹೆಚ್ಚು ಗಿಡಗಳನ್ನು ನೆಡುವ ಮೂಲಕ ಪರಿಸರವನ್ನು ಸಂರಕ್ಷಿಸಬೇಕು. ಎಷ್ಟು ಗಿಡ ನೆಟ್ಟಿದ್ದೇವೆ ಎಂಬುದು ಮುಖ್ಯವಲ್ಲ, ಗಿಡವನ್ನು ಹೇಗೆ ಸಂರಕ್ಷಿಸಿದ್ದೇವೆ ಎಂಬುದು ಮುಖ್ಯ. ಗಿಡಗಳನ್ನು ಮನೆಯ ಸದಸ್ಯರಂತೆಯೇ ಪ್ರೀತಿಸಿ ಸ್ನೇಹ ಸಂಬಂಧವನ್ನು ಬೆಳೆಸಬೇಕು ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲೆ ಡಾ.ಸುಭಾಣಿ ಶ್ರೀವತ್ಸ ಸ್ವಾಗತಿಸಿದರು. ಉಪನ್ಯಾಸಕಿ ದುರ್ಗಾ ಮೆನನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕಿ ಮಧುಶ್ರೀ ಜೆ. ಶ್ರೀಯಾನ್ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿಗಳಾದ ರಂಜಿತ್ ಪ್ರಾರ್ಥಿಸಿದರು. ಪ್ರತಿಭಾ ವಂದಿಸಿದರು. ಚೈತ್ರಾ ಕಾರ್ಯಕ್ರಮ ನಿರೂಪಿಸಿದರು.







