ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ಆರೋಪ:ಸ್ವಯಂ ಘೋಷಿತ ಆಧ್ಯಾತ್ಮಿಕ ಗುರು ಶಿವಶಂಕರ್ ವಿರುದ್ದ ಪ್ರಕರಣ

Photo Credit: Facebook
ಚೆನ್ನೈ: ತಮಿಳುನಾಡಿನ ಚೆನ್ನೈ ಬಳಿಯ ಕೆಲಂಬಾಕ್ಕಂನಲ್ಲಿರುವ ತನ್ನ ಶಿಕ್ಷಣ ಸಂಸ್ಥೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ಸ್ವಯಂ ಘೋಷಿತ ಆಧ್ಯಾತ್ಮಿಕ ಗುರು ಶಿವಶಂಕರ್ ಬಾಬಾ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು India Today ವರದಿ ಮಾಡಿದೆ.
ಸುಶೀಲ್ ಹರಿ ಇಂಟರ್ ನ್ಯಾಶನಲ್ ರೆಸಿಡೆನ್ಶಿಯಲ್ ಶಾಲೆಯಲ್ಲಿ ಅಧ್ಯಯನ ಮಾಡಿದ ಹಲವಾರು ವಿದ್ಯಾರ್ಥಿಗಳು ಶಿವಶಂಕರ್ ಬಾಬಾ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ. ತಾವು ಎದುರಿಸಿದ್ದ ಲೈಂಗಿಕ ಕಿರುಕುಳವನ್ನು ಸಾಮಾಜಿಕ ಜಾಲತಾಣದಲ್ಲಿ ವಿವರಿಸಿದ್ದಾರೆ.
ದೂರುಗಳ ಆಧಾರದ ಮೇರೆಗೆ, ಮಕ್ಕಳ ಕಲ್ಯಾಣ ಸಮಿತಿಯಿಂದ ಶಿವಶಂಕರ್ ಬಾಬಾಗೆ ಸಮನ್ಸ್ ನೀಡಲಾಗಿತ್ತು. ಆದರೆ ಬಾಬಾ ಸಮಿತಿಯ ಮುಂದೆ ಹಾಜರಾಗಲು ವಿಫಲರಾಗಿದ್ದರು. ಸ್ವ ಘೋಷಿತ ಗುರು ಎದೆ ನೋವಿನಿಂದ ಬಳಲುತ್ತಿದ್ದು, ಅವರನ್ನು ಡೆಹ್ರಾಡೂನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಶಿವಶಂಕರ್ ಬಾಬಾ ಟೀಮ್ ತಿಳಿಸಿತ್ತು.
ಸಂತ್ರಸ್ತರು ಸಲ್ಲಿಸಿದ ಮೂರು ದೂರುಗಳ ಆಧಾರದ ಮೇಲೆ ಕೇಲಂಬಾಕ್ಕಂನ ಮಹಿಳಾ ಪೊಲೀಸರು ಶಿವಶಂಕರ್ ಬಾಬಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 354, 363,365 ಹಾಗೂ 366 ಮತ್ತು ಪೋಕ್ಸೊದ ಹಲವಾರು ಸೆಕ್ಷನ್ ಗಳ ಅಡಿಯಲ್ಲಿ ಶಿವಶಂಕರ್ ವಿರುದ್ಧ ಆರೋಪಗಳನ್ನು ಹೊರಿಸಲಾಗಿದೆ.