ಭಾರತ ಸರಕಾರದಲ್ಲಿ ಅತ್ಯಂತ ದಕ್ಷವಾದದ್ದು ʼಸುಳ್ಳು ಹಾಗೂ ಖಾಲಿ ಘೋಷಣೆಗಳ ರಹಸ್ಯ ಸಚಿವಾಲಯʼ: ರಾಹುಲ್ ಗಾಂಧಿ

ಹೊಸದಿಲ್ಲಿ, ಜೂ. 13: ‘‘ಭಾರತ ಸರಕಾರದ ಅತ್ಯಂತ ದಕ್ಷ ಸಚಿವಾಲಯ ಯಾವುದು? ಸುಳ್ಳು ಹಾಗೂ ಖಾಲಿ ಘೋಷಣೆಗಳ ರಹಸ್ಯ ಸಚಿವಾಲಯ.’’ ಎಂದು ರಾಹುಲ್ ಗಾಂಧಿ ರವಿವಾರ ಟ್ವೀಟ್ ಮಾಡಿದ್ದಾರೆ.
ಕೋವಿಡ್ ಲಸಿಕೆಯ ಕೊರತೆ, ಜಿಎಸ್ಟಿ ಹಾಗೂ ತೈಲ ಬೆಲೆ ಏರಿಕೆ ಕುರಿತಂತೆ ರಾಹುಲ್ ಗಾಂಧಿ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ತೈಲ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಶುಕ್ರವಾರ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಿದ ಸಂದರ್ಭ ರಾಹುಲ್ ಗಾಂಧಿ, ಕೇಂದ್ರ ಸರಕಾರ ದೇಶವನ್ನು ಲೂಟಿ ಮಾಡುತ್ತಿದೆ ಎಂದು ಹೇಳಿದ್ದರು.
‘‘ಜಿಡಿಎಸ್ ಕುಸಿತ, ಏರಿಕೆಯಾಗುತ್ತಿರುವ ನಿರುದ್ಯೋಗ, ಗಗನಕ್ಕೇರುತ್ತಿರುವ ತೈಲ ಬೆಲೆ. ಯಾವೆಲ್ಲಾ ರೀತಿಯಲ್ಲಿ ಬಿಜೆಪಿ ಭಾರತವನ್ನು ಲೂಟಿಗೈಯುತ್ತಿದೆ?’’ ಎಂದು ಅವರು ಪ್ರಶ್ನಿಸಿದ್ದಾರೆ. ‘‘ಲಸಿಕೆ ಸ್ವೀಕರಿಸಲು ಆನ್ಲೈನ್ ನೋಂದಣಿ ಮಾತ್ರ ಸಾಕಾಗುವುದಿಲ್ಲ. ಪ್ರತಿಯೋರ್ವನೂ ಲಸಿಕಾ ಕೇಂದ್ರಕ್ಕೆ ನಡೆದುಕೊಂಡು ಹೋಗಿ ಲಸಿಕೆ ಹಾಕಿಸಿಕೊಳ್ಳಬೇಕು. ಇಂಟರ್ನೆಟ್ ಸೌಲಭ್ಯ ಇಲ್ಲದವರಿಗೂ ಬದುಕುವ ಹಕ್ಕು ಇದೆ’’ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.