ಭಾರತವು ಜಿ7 ರಾಷ್ಟ್ರಗಳ ಸಹಜ ಮಿತ್ರ:ಪ್ರಧಾನಿ ಮೋದಿ

ಹೊಸದಿಲ್ಲಿ,ಜೂ.13: ಪರಸ್ಪರ ಹಂಚಿಕೊಂಡಿರುವ ಮೌಲ್ಯಗಳನ್ನು ಸರ್ವಾಧಿಕಾರ, ಭಯೋತ್ಪಾದನೆ, ಹಿಂಸಾತ್ಮಕ ಉಗ್ರವಾದ, ಸುಳ್ಳುಮಾಹಿತಿ ಮತ್ತು ಆರ್ಥಿಕ ದಬ್ಬಾಳಿಕೆಗಳು ಹುಟ್ಟುಹಾಕಿರುವ ಹಲವಾರು ಬೆದರಿಕೆಗಳಿಂದ ರಕ್ಷಿಸುವಲ್ಲಿ ಭಾರತವು ಜಿ7 ರಾಷ್ಟ್ರಗಳ ಸಹಜ ಮಿತ್ರನಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ರವಿವಾರ ಇಲ್ಲಿ ಹೇಳಿದರು.
ಜಿ7 ಶೃಂಗಸಭೆಯಲ್ಲಿ ‘ಮುಕ್ತ ಸಮಾಜಗಳು ಮತ್ತು ಮುಕ್ತ ಆರ್ಥಿಕತೆಗಳು’ ಕುರಿತ ಅಧಿವೇಶನದಲ್ಲಿ ವರ್ಚುವಲ್ ಭಾಷಣವನ್ನು ಮಾಡಿದ ಮೋದಿ,ಪ್ರಜಾಪ್ರಭುತ್ವ,ಚಿಂತನೆಯ ಹಕ್ಕು ಮತ್ತು ಸ್ವಾತಂತ್ರಕ್ಕೆ ಭಾರತದ ನಾಗರಿಕ ಪ್ರತಿಬದ್ಧತೆಯ ಮೇಲೆ ಹೆಚ್ಚಿನ ಬೆಳಕು ಚೆಲ್ಲಿದರು.
ಆಧಾರ್,ನೇರ ನಗದು ವರ್ಗಾವಣೆ ಮತ್ತು ಜೆಎಎಂ(ಜನಧನ-ಆಧಾರ-ಮೊಬೈಲ್)ನಂತಹ ಅನ್ವಯಗಳ ಮೂಲಕ ಭಾರತದಲ್ಲಿ ಸಾಮಾಜಿಕ ಸೇರ್ಪಡೆ ಮತ್ತು ಸಬಲೀಕರಣದ ಮೇಲೆ ಡಿಜಿಟಲ್ ತಂತ್ರಜ್ಞಾನದ ಕ್ರಾಂತಿಕಾರಿ ಪರಿಣಾಮಗಳನ್ನೂ ಅವರು ಪ್ರಮುಖವಾಗಿ ಬಿಂಬಿಸಿದರು.
ಮುಕ್ತ ಸಮಾಜಗಳಲ್ಲಿ ಅಂತರ್ನಿಹಿತವಾಗಿರುವ ದೌರ್ಬಲ್ಯಗಳನ್ನು ತನ್ನ ಭಾಷಣದಲ್ಲಿ ಬೆಟ್ಟುಮಾಡಿದ ಪ್ರಧಾನಿ ತಮ್ಮ ಬಳಕೆದಾರರಿಗಾಗಿ ಸುರಕ್ಷಿತ ಸೈಬರ್ ವಾತಾವರಣವನ್ನು ಖಚಿತಪಡಿಸುವಂತೆ ತಂತ್ರಜ್ಞಾನ ಕಂಪನಿಗಳು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಕರೆ ನೀಡಿದರು.