ಉತ್ತರ ಪ್ರದೇಶ: ಮಸೀದಿಗೆ ತೆರಳುತ್ತಿದ್ದ ವೃದ್ಧನನ್ನು ಅಪಹರಿಸಿ, ಹಲ್ಲೆಗೈದು, ಗಡ್ಡ ಕತ್ತರಿಸಿದ ದುಷ್ಕರ್ಮಿಗಳು

Twitter/@zoo_bear
ಹೊಸದಿಲ್ಲಿ: ಉತ್ತರ ಪ್ರದೇಶದ ಗಾಝಿಯಾಬಾದ್ ಜಿಲ್ಲೆಯ ಲೋನಿ ಎಂಬಲ್ಲಿ ಜೂನ್ 5ರಂದು ಮಸೀದಿಗೆ ಪ್ರಾರ್ಥನೆಗೆಂದು ತೆರಳುತ್ತಿದ್ದ ಅಬ್ದುಲ್ ಸಮದ್ ಎಂಬವರನ್ನು ಲಿಫ್ಟ್ ನೀಡುವುದಾಗಿ ಆಟೋರಿಕ್ಷಾದಲ್ಲಿ ಕರೆದುಕೊಂಡು ಹೋದ ದುಷ್ಕರ್ಮಿಗಳ ತಂಡವೊಂದು ನಂತರ ಅವರನ್ನು ಅಪಹರಿಸಿ ಹತ್ತಿರದ ಅರಣ್ಯ ಪ್ರದೇಶದಲ್ಲಿದ್ದ ಗುಡಿಸಲಿಗೆ ಕರೆದೊಯ್ದು ಅಲ್ಲಿ "ಜೈ ಶ್ರೀ ರಾಮ್" ಮತ್ತು "ವಂದೇ ಮಾತರಂ" ಎಂದು ಬೊಬ್ಬೆ ಹಾಕುತ್ತಾ ಸಮದ್ ಮೇಲೆ ಹಲ್ಲೆಗೈದು ಅವರ ಗಡ್ಡವನ್ನು ಕತ್ತರಿಸಿದ್ದಾರೆಂದು ಆರೋಪಿಸಲಾಗಿದೆ. ಸಮದ್ ಓರ್ವ ಪಾಕಿಸ್ತಾನಿ ಗೂಢಚರನೆಂದೂ ದುಷ್ಕರ್ಮಿಗಳು ಆರೋಪಿಸಿದ್ದರೆನ್ನಲಾಗಿದೆ.
ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಅದರಲ್ಲಿ ಬಿಳಿ ಟಿ-ಶರ್ಟ್ ಮತ್ತು ನೀಲಿ ಪ್ಯಾಂಟ್ ಧರಿಸಿದವನೊಬ್ಬ ಚೂರಿಯಿಂದ ಬಲವಂತದಿಂದ ಸಮದ್ ಗಡ್ಡ ಕತ್ತರಿಸುವುದು ಕಾಣಿಸುತ್ತದೆ. ವೀಡಿಯೋದಲ್ಲಿ ಕನಿಷ್ಠ ಮೂವರು ದುಷ್ಕರ್ಮಿಗಳಿರುವುದು ಕಾಣಿಸುತ್ತದೆ.
ದುಷ್ಕರ್ಮಿಗಳು ಸಮದ್ ಅವರ ಮೊಬೈಲ್ ಕೂಡ ಸೆಳೆದಿದ್ದಾರೆನ್ನಲಾಗಿದ್ದು ಘಟನೆಯ ನಂತರ ಸಮದ್ ಬಹಳಷ್ಟು ನೊಂದಿದ್ದಾರೆ. ದಾಳಿಗೊಳಗಾದ ಇತರ ಮುಸ್ಲಿಮರ ವೀಡಿಯೋಗಳನ್ನೂ ತೋರಿಸಿ ಆರೋಪಿಗಳು ಸಮದ್ ಅವರನ್ನು ಬೆದರಿಸಿದ್ದರೆನ್ನಲಾಗಿದ್ದು ತಾವು ಈ ಹಿಂದೆ ಕೂಡ ಅವರ ಸಮುದಾಯದ ಹಲವರನ್ನು ಕೊಲೆಗೈದಿರುವುದಾಗಿಯೂ ಅವರು ಹೇಳಿಕೊಂಡಿದ್ದರೆನ್ನಲಾಗಿದೆ ಎಂದು ndtv.com ವರದಿ ಮಾಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಆರೋಪಿ ಪ್ರವೇಶ್ ಗುಜ್ಜರ್ ಎಂಬಾತನನ್ನು ಬಂಧಿಸಲಾಗಿದ್ದು ಉಳಿದವರಿಗಾಗಿ ಶೋಧ ನಡೆಯುತ್ತಿದೆ.