ಜಾನುವಾರು ಸಾಗಾಟ ಮಾಡುತ್ತಿದ್ದ ವ್ಯಕ್ತಿಯ ಥಳಿಸಿ ಹತ್ಯೆಗೈದ ಗುಂಪು

ಸಾಂದರ್ಭಿಕ ಚಿತ್ರ
ಚಿತ್ತೋರಘರ್: ರಾಜಸ್ಥಾನದ ಚಿತ್ತೋರ್ ಗಡದಲ್ಲಿ ಜಾನುವಾರು ಸಾಗಾಟ ಮಾಡುತ್ತಿದ್ದವರ ಮೇಲೆ ದಾಳಿ ನಡೆಸಿದ್ದ ಗುಂಪೊಂದು ಓರ್ವ ವ್ಯಕ್ತಿಯನ್ನು ಥಳಿಸಿ ಸಾಯಿಸಿದರೆ, ಇನ್ನೋರ್ವ ಗಾಯಗೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಜೂನ್ 13 ಹಾಗೂ 14ರ ಮಧ್ಯರಾತ್ರಿ ಚಿತ್ತೋರ್ ಗಡದ ನಿವಾಸಿಗಳಿಬ್ಬರು ಮಧ್ಯ ಪ್ರದೇಶಕ್ಕೆ ಜಾನುವಾರುಗಳನ್ನು ಸಾಗಿಸುತ್ತಿದ್ದರು. ಈ ವೇಳೆ ದೊಡ್ಡ ಗುಂಪೊಂದು ಅವರನ್ನು ತಡೆದು ನಿಲ್ಲಿಸಿ ವಾಹನದಿಂದ ಹೊರಗೆಳೆದು ಥಳಿಸಿತ್ತು. ದಾಳಿಯ ಬಳಿಕ ಓರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟಿದ್ದಾರೆ. ಹತ್ಯೆ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ(ಅಪರಾಧ)ರವಿ ಪ್ರಕಾಶ್ ಮೆಹಾರ್ದ ಸೋಮವಾರ ತಿಳಿಸಿದ್ದಾರೆ.
ಗುಂಪು ಹತ್ಯೆಗೀಡಾದವರನ್ನು ಬಾಬು(25 ವರ್ಷ)ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಇನ್ನೊಬ್ಬನನ್ನು ಪಿಂಟು ಎಂದು ಗುರುತಿಸಲಾಗಿದೆ.
ಚಿತ್ತೋರ್ ಗಡ ಪೊಲೀಸರು 7-8 ಜನರನ್ನು ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಶೀಘ್ರವೇ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಲಾಗುವುದು ಎಂದು ರವಿ ಪ್ರಕಾಶ್ ತಿಳಿಸಿದ್ದಾರೆ.
"ಗುಂಪೊಂದು ವಾಹನದಲ್ಲಿ ದನ ಸಾಗಿಸುತ್ತಿದ್ದ ಇಬ್ಬರು ವ್ಯಕ್ತಿಗಳಿಗೆ ಥಳಿಸುತ್ತಿದೆ ಎಂಬ ಸುದ್ದಿ ಮಧ್ಯರಾತ್ರಿ ದೊರಕಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ರೈತಿ ಹಾಗೂ ಸುತ್ತಮುತ್ತಲಿನ ಸ್ಥಳಗಳ ಜನರು ಬಾಬು ಹಾಗೂ ಪಿಂಟು ಎಂಬ ಇಬ್ಬರಿಗೆ ಥಳಿಸುತ್ತಿರುವುದು ಕಂಡು ಬಂತು. ದಾಳಿಕೋರರು ಆ ಇಬ್ಬರಲ್ಲಿದ್ದ ದಾಖಲೆಗಳು ಹಾಗೂ ಅವರ ಮೊಬೈಲ್ ಫೋನ್ ಸೆಳೆದಿದ್ದಾರೆ. ಪೊಲೀಸರನ್ನು ಕಂಡ ಕೂಡಲೇ ದುಷ್ಕರ್ಮಿಗಳು ಪರಾರಿಯಾದರು, ಇಬ್ಬರನ್ನೂ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಬಾಬು ಜೀವ ಉಳಿಸಲಾಗಿಲ್ಲ,'' ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.