ಕೋವಿಡ್ ನಿಂದ ಮೃತಪಟ್ಟ ವೃದ್ಧ ದಂಪತಿಯ ಆಸ್ತಿ ಲಪಟಾಯಿಸಲು ಯತ್ನ ಆರೋಪ: ಬಿಜೆಪಿ ನಾಯಕಿಯ ಬಂಧನ

ಡೆಹ್ರಾಡೂನ್: ಕ್ಲೆಮೆಂಟ್ ಟೌನ್‌ನಲ್ಲಿ ಕೋವಿಡ್ -19 ಗೆ ಬಲಿಯಾಗಿದ್ದ ವೃದ್ಧ ದಂಪತಿಯ ಒಡೆತನದ ಆಸ್ತಿಯನ್ನು ಲಪಟಾಯಿಸಲು ಯತ್ನಿಸಿದ ಉತ್ತರಾಖಂಡದ ಬಿಜೆಪಿ ಮಹಿಳಾ ಮೋರ್ಚಾ (ಮಹಿಳಾ ವಿಭಾಗ) ಪ್ರಧಾನ ಕಾರ್ಯದರ್ಶಿ, ಅವರ ಇಬ್ಬರು ಗಂಡು ಮಕ್ಕಳು ಹಾಗೂ ಸಹಾಯಕನನ್ನು ರವಿವಾರ ಬಂಧಿಸಲಾಗಿದೆ.
ಬಿಜೆಪಿ ನಾಯಕಿಯನ್ನು ಅನಿರ್ದಿಷ್ಟ ಅವಧಿಗೆ ಪಕ್ಷದಿಂದ ಉಚ್ಚಾಟಿಸಲಾಗಿದೆ.
ಸೀಲ್ ಹಾಕಲಾಗಿದ್ದ ಆಸ್ತಿಯನ್ನು ವಶಪಡಿಸಿಕೊಳ್ಳಲು ಯತ್ನಿಸಿರುವುದು ಪತ್ತೆಯಾದ ನಂತರ ರೀನಾ ಗೋಯಲ್, ಅವರ ಇಬ್ಬರು ಗಂಡು ಮಕ್ಕಳಾದ ಲಾವ್ಯಾ ಹಾಗೂ ರಿಷಭ್ ಗೋಯಲ್ ಮತ್ತು ಸಹಾಯಕ ಅನುಜ್ ಸೈನಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ರವಿವಾರ ಅಮೆರಿಕ ಮೂಲದ ಮೃತ ಮಹಿಳೆಯ ಸಹೋದರ ಇ-ಮೇಲ್ ಮೂಲಕ ಪೊಲೀಸರನ್ನು ಎಚ್ಚರಿಸಿದ್ದರು. ಅವರು ತನ್ನ ದೂರಿನಲ್ಲಿ, ಬಿಜೆಪಿ ನಾಯಕಿ ಡೆಹ್ರಾಡೂನ್‌ನಲ್ಲಿರುವ ತನ್ನ ಸಹೋದರಿಯ ಆಸ್ತಿಯನ್ನು ವಶಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದರು.
ಮೃತ ದಂಪತಿಗಳಾದ ಡಿ.ಕೆ. ಮಿತ್ತಲ್ ಹಾಗೂ ಅವರ ಪತ್ನಿ ಸುಶೀಲಾ ಮಿತ್ತಲ್, 80 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರು. ಇಬ್ಬರೂ ನಗರದ ಕ್ಲೆಮೆಂಟ್ ಟೌನ್ ಪ್ರದೇಶದಲ್ಲಿ ಕೋಟ್ಯಂತರ ಮೌಲ್ಯದ ಮನೆಯಲ್ಲಿ ವಾಸಿಸುತ್ತಿದ್ದರು ಎಂದು ಡೆಹ್ರಾಡೂನ್‌ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಯೋಗೇಂದ್ರ ಸಿಂಗ್ ರಾವತ್ ಹೇಳಿದ್ದಾರೆ.
ಕೊರೋನ ವೈರಸ್ ನಿಂದಾಗಿ ಮೇ 2 ರಂದು ಸುಶೀಲಾ ಮಿತ್ತಲ್ ನಿಧನರಾದ ನಂತರ, ಅವರ ಪತಿ ಕೂಡ ಸೋಂಕಿಗೆ ಒಳಗಾಗಿದ್ದರು. ಅವರು ಜೂನ್ 6 ರಂದು ಸಾವನ್ನಪ್ಪಿದ್ದರು. ಅವರ ಏಕೈಕ ಪುತ್ರ ಸುಮಾರು ಎರಡು ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ಹೀಗಾಗಿ ಆಸ್ತಿಗೆ ಯಾರೂ ವಾರಿಸುದಾರರು ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ವೃದ್ಧ ದಂಪತಿಯ ಆಸ್ತಿಯನ್ನು ನೋಡಿಕೊಳ್ಳುವವರು ಯಾರೂ ಇಲ್ಲದ ಕಾರಣ ಅಮೆರಿಕದಲ್ಲಿ ನೆಲೆಸಿದ್ದ ಸುಶೀಲಾ ಅವರ ಸಹೋದರ ಹಾಗೂ ದೂರುದಾರ ಸುರೇಶ್ ಮಹಾಜನ್ ಅವರು ಸ್ಥಳೀಯ ಕ್ಲೆಮೆಂಟ್ ಟೌನ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ಹಾಗೂ ಯಾವುದೇ ಅಕ್ರಮ ಚಟುವಟಿಕೆಯನ್ನು ತಡೆಯಲು ಆಸ್ತಿಯನ್ನು ಸೀಲ್ ಮಾಡಲಾಗಿತ್ತು ಎಂದು ರಾವತ್ ಹೇಳಿದರು.