ಬಿಜೆಪಿ, ಆರೆಸ್ಸೆಸ್‌ಗೆ ರಾಮ ಮಂದಿರ ವ್ಯವಹಾರ ಮಾಧ್ಯಮ: ಎಸ್‌ಬಿಎಸ್‌ಪಿ ವರಿಷ್ಠ ರಾಜ್‌ಭರ್
ಅಯೋಧ್ಯೆ ಭೂ ಹಗರಣ ಆರೋಪ

ಬಲ್ಲಿಯಾ, ಜೂ. 14: ಅಯೋಧ್ಯೆಯಲ್ಲಿ ಪ್ರಸ್ತಾವಿತ ರಾಮಮಂದಿರಕ್ಕೆ ಭೂ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಕುರಿತು ಕೇಂದ್ರದ ತನಿಖಾ ಸಂಸ್ಥೆಯಿಂದ ತನಿಖೆಯ ಆಗ್ರಹಕ್ಕೆ ಸೋಮವಾರ ಬೆಂಬಲ ವ್ಯಕ್ತಪಡಿಸಿರುವ ಸುಹೇಲ್‌ದೇವ್ ಭಾರತೀಯ ಸಮಾಜ್ ಪಾರ್ಟಿ (ಎಸ್‌ಬಿಎಸ್‌ಪಿ) ವರಿಷ್ಠ ಓಂ ಪ್ರಕಾಶ್ ರಾಜ್‌ಭರ್, ಬಿಜೆಪಿ ಹಾಗೂ ಆರೆಸ್ಸೆಸ್ ರಾಮಮಂದಿರವನ್ನು ವ್ಯವಹಾರದ ಮಾಧ್ಯಮನ್ನಾಗಿ ಮಾಡಿದೆ ಎಂದು ಆರೋಪಿಸಿದ್ದಾರೆ. ಆರೋಪಿಗಳ ವಿರುದ್ಧ ಯಾವಾಗ ಕ್ರಮ ಕೈಗೊಳ್ಳುತ್ತೀರಿ ಎಂದು ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರಲ್ಲಿ ಪ್ರಶ್ನಿಸಿದ್ದಾರೆ.
ರಾಸ್ರಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್‌ಭರ್, ‘‘ದೇವಾಲಯ ಸಾಮಾನ್ಯ ಜನರ ನಂಬಿಕೆಯ ಸಂಕೇತ. ಆದರೆ, ಬಿಜೆಪಿ ಹಾಗೂ ಆರೆಸ್ಸೆಸ್ ಅದನ್ನು ವ್ಯವಹಾರದ ಮಾಧ್ಯಮವನ್ನಾಗಿ ಮಾಡಿದೆ’’ ಎಂದಿದ್ದಾರೆ. ರಾಮಮಂದಿರ ನಿರ್ಮಾಣ ಮಾಡಲು ಮಾರ್ಚ್ 18ರಂದು 2 ಕೋಟಿ ರೂಪಾಯಿಗೆ ತುಂಡು ಭೂಮಿಯೊಂದನ್ನು ಖರೀದಿಸಲಾಗಿತ್ತು. ಐದು ನಿಮಿಷಗಳ ಬಳಿಕ ಅದನ್ನು ರಾಮ ಮಂದಿರ ಟ್ರಸ್ಟ್‌ಗೆ 18.50 ಕೋಟಿ ರೂಪಾಯಿಗೆ ಮಾರಾಟ ಮಾಡಲಾಯಿತು ಎಂದು ಅವರು ಹೇಳಿದ್ದಾರೆ.
ಈ ಹಗರಣದ ವಿರುದ್ಧ ಸಿಬಿಐ ಹಾಗೂ ಜ್ಯಾರಿ ನಿರ್ದೇಶನಾಲಯದಿಂದ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ನರೇಂದ್ರ ಮೋದಿ ಹಾಗೂ ಆದಿತ್ಯನಾಥ್ ಅವರನ್ನು ಗುರಿಯಾಗಿರಿಸಿ ವಾಗ್ದಾಳಿ ನಡೆಸಿದ ಅವರು, ‘‘ಇಬ್ಬರೂ ನಾಯಕರು ಶೂನ್ಯ ಸಹಿಷ್ಣುತೆ ವ್ಯಕ್ತಪಡಿಸುತ್ತಿದ್ದಾರೆ. ರಾಮ ಮಂದಿರ ಟ್ರಸ್ಟಿಯ ವಿರುದ್ಧ ಯಾವಾಗ ಪ್ರಕರಣದ ದಾಖಲಿಸುತ್ತೀರಿ ಹಾಗೂ ಯಾವಾಗ ಆರೋಪಿಗಳನ್ನು ಜೈಲಿಗೆ ಕಳುಹಿಸುತ್ತೀರಿ ಎಂದು ಮೋದಿ ಜಿ ಹಾಗೂ ಯೋಗಿ ಜಿ ಸ್ಪಷ್ಟಪಡಿಸಬೇಕು’’ ಎಂದು ರಾಜ್‌ಭರ್ ಹೇಳಿದ್ದಾರೆ.