ಜಾಧವ್ ಪ್ರಕರಣವನ್ನು ತಪ್ಪಾಗಿ ನಿಭಾಯಿಸಿದ ಹಿಂದಿನ ಸರಕಾರ: ಪಾಕಿಸ್ತಾನದ ವಿದೇಶ ಸಚಿವ

ಇಸ್ಲಾಮಾಬಾದ್ (ಪಾಕಿಸ್ತಾನ), ಜೂ. 14: ಹಿಂದಿನ ಸರಕಾರವು ಕುಲಭೂಷಣ್ ಜಾಧವ್ ಪ್ರಕರಣವನ್ನು ‘ತಪ್ಪಾಗಿ ನಿಭಾಯಿಸಿದೆ’ ಎಂದು ಪಾಕಿಸ್ತಾನದ ವಿದೇಶ ಸಚಿವ ಶಾ ಮೆಹ್ಮೂದ್ ಖುರೇಶಿ ಸೆನೆಟ್‌ನಲ್ಲಿ ಹೇಳಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದ ಮಸೂದೆಯೊಂದರ ಬಗ್ಗೆ ದೇಶದ ಸೆನೆಟ್‌ನಲ್ಲಿ ಚರ್ಚೆ ನಡೆದಿತ್ತು.
ಭಾರತೀಯ ಪ್ರಜೆ ಕುಲಭೂಷಣ್ ಜಾಧವ್‌ರನ್ನು ಬೇಹುಗಾರಿಕೆ ಆರೋಪದಲ್ಲಿ ಪಾಕಿಸ್ತಾನ ನಾಲ್ಕು ವರ್ಷಗಳ ಹಿಂದೆ ಬಂಧಿಸಿತ್ತು ಹಾಗೂ ಆ ದೇಶದ ಸೇನಾ ನ್ಯಾಯಾಲಯವೊಂದು ಬಳಿಕ ಅವರಿಗೆ ಮರಣ ದಂಡನೆ ಶಿಕ್ಷೆಯನ್ನು ಘೋಷಿಸಿತ್ತು. ಇದನ್ನು ಭಾರತವು ಅಂತರ್‌ರಾಷ್ಟ್ರೀಯ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು. ನ್ಯಾಯಾಲಯವು ಮರಣ ದಂಡನೆಗೆ ತಡೆಯಾಜ್ಞೆ ನೀಡಿದೆ ಹಾಗೂ ಜಾಧವ್‌ರನ್ನು ಸಂಪರ್ಕಿಸಲು ಭಾರತೀಯ ಅಧಿಕಾರಿಗಳಿಗೆ ಅವಕಾಶ ನೀಡುವಂತೆ ಸೂಚಿಸಿದೆ. ಅದೂ ಅಲ್ಲದೆ, ತನ್ನ ಶಿಕ್ಷೆಯನ್ನು ಪ್ರಶ್ನಿಸಿ ನಾಗರಿಕ ನ್ಯಾಯಾಲಯವೊಂದರಲ್ಲಿ ಮೇಲ್ಮನವಿ ಸಲ್ಲಿಸಲು ಜಾಧವ್‌ಗೆ ಅವಕಾಶ ನೀಡುವಂತೆಯೂ ಅಂತರ್‌ರಾಷ್ಟ್ರೀಯ ನ್ಯಾಯಾಲಯವು ಪಾಕಿಸ್ತಾನಕ್ಕೆ ಆದೇಶ ನೀಡಿದೆ.
ಪಾಕಿಸ್ತಾನದಲ್ಲಿ ಸೇನಾ ನ್ಯಾಯಾಲಯಗಳಿಂದ ಶಿಕ್ಷೆಗೆ ಒಳಗಾಗುವ ವಿದೇಶೀಯರು ತಮ್ಮ ಶಿಕ್ಷೆಯನ್ನು ಹೈಕೋರ್ಟ್‌ಗಳಲ್ಲಿ ಪ್ರಶ್ನಿಸಲು ಅವಕಾಶ ನೀಡುವ ಮಸೂದೆಯನ್ನು ಪಾಕಿಸ್ತಾನದ ಸೆನೆಟ್ ಕಳೆದ ವಾರದ ಗುರುವಾರ ಅಂಗೀಕರಿಸಿದೆ.
ಜಾಧವ್ ಪ್ರಕರಣಕ್ಕೆ ಸಂಬಂಧಿಸಿ ಅಂತರ್‌ರಾಷ್ಟ್ರೀಯ ನ್ಯಾಯಾಲಯವು ನೀಡಿರುವ ಆದೇಶಗಳನ್ನು ಪಾಲಿಸುವ ಹಾಗೂ ‘‘ಪಾಕಿಸ್ತಾನವನ್ನು ಇನ್ನೊಮ್ಮೆಗೆ ನ್ಯಾಯಾಲಯಕ್ಕೆ ಎಳೆಯಲು ಭಾರತಕ್ಕೆ ಅವಕಾಶ ಕೊಡದಿರುವ’’ ಉದ್ದೇಶದ ಮಸೂದೆಯನ್ನು ಸೆನೆಟ್ ಕಳೆದ ವಾರ ಅಂಗೀಕರಿಸಿದೆ ಎಂದು ಮುಲ್ತಾನ್ ನಗರದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶಾ ಮೆಹ್ಮೂದ್ ಖುರೇಶಿ ಹೇಳಿದರು.