ಜಗತ್ತಿಗೆ ಬೋಧಿಸುವುದನ್ನು ಮೋದಿ ಸರಕಾರ ಕಾರ್ಯದಲ್ಲಿ ಮಾಡಿ ತೋರಿಸಲಿ: ಪಿ.ಚಿದಂಬರಂ

ಹೊಸದಿಲ್ಲಿ, ಜೂ.14: ರವಿವಾರ ಜಿ-7 ಶೃಂಗಸಭೆಯನ್ನುದ್ದೇಶಿಸಿ ಭಾಷಣ ಮಾಡಿದ ಸಂದರ್ಭ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಒತ್ತು ನೀಡುವ ಬಗ್ಗೆ ಪ್ರತಿಪಾದಿಸಿದ್ದ ಪ್ರಧಾನಿ ಮೋದಿ, ಜಗತ್ತಿಗೆ ಬೋಧಿಸುವುದನ್ನು ಭಾರತದಲ್ಲಿ ಮೊದಲು ಅನುಸರಿಸಲಿ ಎಂದು ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಆಗ್ರಹಿಸಿದ್ದಾರೆ. ಸರ್ವಾಧಿಕಾರಿಗಳಿಂದ, ಭಯೋತ್ಪಾದಕರಿಂದ, ಹಿಂಸಾಚಾರ ಉಗ್ರವಾದಿಗಳಿಂದ ಮತ್ತು ಆರ್ಥಿಕ ಒತ್ತಡ ಕ್ರಮದಿಂದ ಪ್ರಜಾಪ್ರಭುತ್ವ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಎದುರಾಗುವ ಬೆದರಿಕೆಗಳನ್ನು ಎದುರಿಸುವಲ್ಲಿ ಜಿ-7 ಒಕ್ಕೂಟ ಮತ್ತು ಅದರ ಸಹಯೋಗಿಗಳಿಗೆ ಭಾರತವು ನೈಜ ಮಿತ್ರನಾಗಿದೆ ಎಂದು ರವಿವಾರ ಪ್ರಧಾನಿ ಮೋದಿ ಹೇಳಿದ್ದರು.
ಜಿ-7 ಶೃಂಗಸಭೆಯಲ್ಲಿ ಪ್ರಧಾನಿ ಮೋದಿಯ ಭಾಷಣ ಸ್ಫೂರ್ತಿದಾಯಕವಷ್ಟೇ ಅಲ್ಲ ವಿಡಂಬನಾತ್ಮಕವೂ ಆಗಿದೆ. ಆದರೆ ಜಗತ್ತಿಗೆ ಬೋಧಿಸುವುದನ್ನು ಪ್ರಧಾನಿ ಮೋದಿ ಮೊದಲು ಭಾರತದಲ್ಲಿ ಆಚರಣೆಗೆ ತರಬೇಕು. ಜಿ-7 ಶೃಂಗಸಭೆಯಲ್ಲಿ ದೈಹಿಕವಾಗಿ ಉಪಸ್ಥಿತರಿರದ ಏಕೈಕ ಅತಿಥಿ ಪ್ರಧಾನಿ ಮೋದಿ ಎಂಬುದು ಬೇಸರದ ವಿಷಯವಾಗಿದೆ. ಯಾಕೆ ಎಂದು ನಿಮ್ಮನ್ನೇ ಪ್ರಶ್ನಿಸಿಕೊಳ್ಳಿ. ಯಾಕೆಂದರೆ ಕೊರೋನ ಸೋಂಕಿನ ವಿರುದ್ಧದ ಹೋರಾಟಕ್ಕೆ ಸಂಬಂಧಿಸಿ ನಮ್ಮನ್ನು ‘ಹೊರಗಿಡಲಾಗಿದೆ’. ಜನಸಂಖ್ಯೆಯ ಪ್ರಮಾಣವನ್ನು ಪರಿಗಣಿಸಿದರೆ ವಿಶ್ವದಲ್ಲೇ ಅತ್ಯಂತ ಕನಿಷ್ಟ ಲಸಿಕೀಕರಣ ನಡೆಸಿದ ರಾಷ್ಟ್ರ ನಮ್ಮಾಗಿದೆ ಎಂದು ಚಿದಂಬರಂ ಟೀಕಿಸಿದ್ದಾರೆ.







