ರಾಜ್ಯಪಾಲರ ಭೇಟಿಯಾದ ಸುವೇಂದು ಅಧಿಕಾರಿ, ಬಿಜೆಪಿ ನಿಯೋಗದಲ್ಲಿ ಹಲವು ಶಾಸಕರು ಗೈರು

ಕೋಲ್ಕತಾ: ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಗೆ ತನ್ನ ನಾಯಕರು ಸೇರಲಿದ್ದಾರೆಂಬ ವರದಿಗಳನ್ನು ತಡೆಯಲು ಬಿಜೆಪಿ ಪ್ರಯತ್ನಗಳು ಇಂದು ವಿಫಲವಾದ್ದಂತೆ ಕಂಡುಬಂದಿದೆ. ರಾಜ್ಯಪಾಲರೊಂದಿಗಿನ ಸುವೇಂದು ಅಧಿಕಾರಿಯ ಭೇಟಿಯಿಂದ ಬಿಜೆಪಿಯ ಹಲವು ಶಾಸಕರು ದೂರ ಉಳಿದಿದ್ದಾರೆ.
ಬಂಗಾಳ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿರುವ ಅಧಿಕಾರಿ ಅವರು ಇಂದು ಸಂಜೆ ಬಿಜೆಪಿ ಶಾಸಕರ ನಿಯೋಗದೊಂದಿಗೆ ರಾಜ್ಯಪಾಲ ಜಗದೀಪ್ ಧಂಕರ್ ಅವರನ್ನು ರಾಜ್ ಭವನದಲ್ಲಿ ಭೇಟಿ ಮಾಡಿದ್ದರು.
ರಾಜ್ಯಪಾಲರ ಭೇಟಿಯ ವೇಳೆ ಬಂಗಾಳದಲ್ಲಿ ನಡೆಯುತ್ತಿರುವ ಹಲವಾರು ಅನುಚಿತ ಘಟನೆಗಳ ಬಗ್ಗೆ ಹಾಗೂ ಇತರ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲು ಉದ್ದೇಶಿಸಲಾಗಿತ್ತು.
ಆದರೆ ಬಿಜೆಪಿಯ 74 ಶಾಸಕರಲ್ಲಿ 24 ಶಾಸಕರು ಸುವೇಂದು ಅವರೊಂದಿಗೆ ಹೋಗಲು ವಿಫಲರಾಗಿದ್ದರಿಂದ, ಪಕ್ಷದಿಂದ ಮತ್ತಷ್ಟು ಹಿಮ್ಮುಖ ವಲಸೆಯ ಸಾಧ್ಯತೆಯ ಬಗ್ಗೆ ಊಹಾಪೋಹಗಳು ಆರಂಭವಾಗಿವೆ. ಎಲ್ಲಾ ಶಾಸಕರು ಸುವೇಂದು ಅಧಿಕಾರಿಯ ನಾಯಕತ್ವವನ್ನು ಸ್ವೀಕರಿಸಲು ಸಿದ್ಧರಿಲ್ಲ ಎಂಬ ಅಭಿಪ್ರಾಯಕ್ಕೂ ಕಾರಣವಾಗಿದೆ.
ಕಳೆದ ಡಿಸೆಂಬರ್‌ನಲ್ಲಿ ಬಿಜೆಪಿಗೆ ಸೇರ್ಪಡೆಯಾದ ಅಧಿಕಾರಿಯು ಆರಂಭದಲ್ಲಿ ಹೆಚ್ಚಿನ ಸಂಖ್ಯೆಯ ನಾಯಕರು ತನ್ನನ್ನು ಹಿಂಬಾಲಿಸುವಂತೆ ಮನವೊಲಿಸಿದ್ದರು. ನಂತರ ನಂದಿಗ್ರಾಮ್‌ನಿಂದ ಮಮತಾ ಬ್ಯಾನರ್ಜಿ ವಿರುದ್ಧ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ ಜಯ ಗಳಿಸುವ ಮೂಲಕ ಪಕ್ಷದಲ್ಲಿ ಪ್ರಾಮುಖ್ಯತೆ ಪಡೆದಿದ್ದಾರೆ.
ಚುನಾವಣೆಯ ಬಳಿಕ ಅಧಿಕಾರಿ ವಿರೋಧ ಪಕ್ಷದ ನಾಯಕನಾಗಿ ನೇಮಕಗೊಂಡಿದ್ದಲ್ಲದೆ, ಪ್ರಧಾನಿ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಡುವೆ ಚಂಡಮಾರುತ ಪರಿಶೀಲನಾ ಸಭೆಗೂ ಅಧಿಕಾರಿಯನ್ನು ಆಹ್ವಾನಿಸಲಾಗಿತ್ತು. .
ಹಲವಾರು ಶಾಸಕರು ಅಸಮಾಧಾನಗೊಂಡಿದ್ದಾರೆ ಹಾಗೂ ಕೆಲವರು ತೃಣಮೂಲದೊಂದಿಗೆ ಸಂಪರ್ಕದಲ್ಲಿದ್ದಾರೆ. ಮುಕುಲ್ ರಾಯ್ ಅವರ ಹೆಜ್ಜೆಗಳನ್ನು ಅನುಸರಿಸುವ ಆಶಯದಲ್ಲಿದ್ದಾರೆ ಮೂಲಗಳು ತಿಳಿಸಿವೆ.







