ಬೃಹತ್ ಹೋರಾಟದ 200ನೇ ದಿನ: ರೈತರ ಒಕ್ಕೂಟ
ಬಲ್ಲಿಯಾ, ಜೂ. 14: ವಿವಾದಾತ್ಮಕ ಮೂರು ಕೃಷಿ ಕಾಯ್ದೆಗಳ ವಿರುದ್ಧ ಕಳೆದ ವರ್ಷ ಆರಂಭಿಸಲಾದ ಪ್ರತಿಭಟನೆ ಮುಂದುವರಿಯಲಿದ್ದು, ನಮ್ಮ ಪ್ರತಿಭಟನೆ ಇಂದು 200ನೇ ದಿನಕ್ಕೆ ಕಾಲಿರಿಸಿದೆ ಎಂದು ಸೋಮವಾರ ರೈತರ ಒಕ್ಕೂಟ ಹೇಳಿದೆ.
ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಿ ಮುಖ್ಯವಾಗಿ ಪಂಜಾಬ್, ಹರ್ಯಾಣ, ಪಶ್ಚಿಮ ಉತ್ತರಪ್ರದೇಶದ ಸಾವಿರಾರು ರೈತರು ದಿಲ್ಲಿಯ ಮೂರು ವಿಭಿನ್ನ ಗಡಿಯಲ್ಲಿ ನವೆಂಬರ್ನಲ್ಲಿ ಪ್ರತಿಭಟನೆ ಆರಂಭಿಸಿದ್ದರು. ಸಿಂಘು, ಟಿಕ್ರಿ ಹಾಗೂ ಗಾಝಿಪುರ ಗಡಿಯಲ್ಲಿ ನಡೆದ ಈ ಪ್ರತಿಭಟನೆಗೆ ಸಾಮಾಜಿಕ ಕಾರ್ಯಕರ್ತರು ಹಾಗೂ ಸ್ಥಳೀಯರಿಂದ ಬೆಂಬಲ ವ್ಯಕ್ತವಾಗಿತ್ತು. ಇಂದು ಬೆಳಗ್ಗೆ ಕಿಸಾನ್ ಏಕ್ತಾ ಮೋರ್ಚಾ, ‘‘200 ದಿನಗಳನ್ನು ಪೂರ್ಣಗೊಳಿಸುತ್ತಿರುವ ಭಾರತ ಇತಿಹಾಸದ ಅತಿ ದೊಡ್ಡ ಪ್ರತಿಭಟನೆ ಮುಂದುವರಿದಿದೆ’’ ಎಂದು ಟ್ವೀಟ್ ಮಾಡಿದೆ. ನಮ್ಮ ಬೇಡಿಕೆ ಈಡೇರುವ ವರೆಗೆ ಪ್ರತಿಭಟನೆ ತೀವ್ರಗೊಳಿಸುವ ಎಲ್ಲ ಸಿದ್ಧತೆಯನ್ನು ರೈತರು ಮಾಡಿದ್ದಾರೆ ಎಂದು ರೈತರ ಒಕ್ಕೂಟ ಹೇಳಿದ್ದಾರೆ.
ಕೊರೆಯುತ್ತಿರುವ ಚಳಿ, ಕೊರೋನ ಸಾಂಕ್ರಾಮಿಕ ರೋಗದ ನಡುವೆಯೂ ರೈತರು ಕಳೆದ 6 ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ತಾವು ಜೂನ್ 26ರಂದು ದೇಶಾದ್ಯಂತ ರಾಜ್ಯಪಾಲರ ನಿವಾಸದ ಎದುರು ಧರಣಿ ಆಯೋಜಿಲಿದ್ದೇವೆ ಎಂದು ಕಳೆದ ವಾರ ಜೂನ್ 11ರಂದು ಪ್ರತಿಭಟನೆ ನಡೆಸುತ್ತಿರುವ ರೈತರ ಒಕ್ಕೂಟ ಘೋಷಿಸಿತ್ತು. ಅಂದು ರೈತರ ನೇತೃತ್ವದ ಪ್ರತಿಭಟನೆ ಏಳು ತಿಂಗಳನ್ನು ಪೂರ್ಣಗೊಳ್ಳಲಿದೆ ಎಂದು ಹೇಳಿತ್ತು. ನಾವು ಕರಿ ಪತಾಕೆ ಪ್ರದರ್ಶಿಶಿಲಿದ್ದೇವೆ ಹಾಗೂ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ನೆನಪೋಲೆ ಕಳುಹಿಸಲಿದ್ದೇವೆ ಎಂದು ಜೂನ್ 26ರಂದು ಸಂಯುಕ್ತ ಕಿಸಾನ್ ಮೋರ್ಚಾ ತಿಳಿಸಿತ್ತು. ಅಂದು ಕೃಷಿ ರಕ್ಷಿಸಿ, ಪ್ರಜಾಪ್ರಭುತ್ವ ರಕ್ಷಿಸಿ ದಿನ’ ಆಚರಿಸಲಾಗುವುದು ಎಂದು ರೈತ ನಾಯಕ ಇಂದ್ರಜಿತ್ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ‘‘ನಾವು ಪ್ರತಿ ರಾಜ್ಯದಲ್ಲಿ ರಾಜ ಭವನದ ಎದುರು ಕರಿ ಪತಾಕೆ ಪ್ರದರ್ಶಿಸುವ ಹಾಗೂ ರಾಷ್ಟ್ರಪತಿ ಅವರಿಗೆ ನೆನಪೋಲೆ ಕಳುಹಿಸುವ ಮೂಲಕ ಪ್ರತಿಭಟನೆ ನಡೆಸಲಿದ್ದೇವೆ. ಜನವರಿ 26 ತುರ್ತು ಪರಿಸ್ಥಿತಿ ಘೋಷಿಸಿದ ದಿನ. ಅಂದು ನಮ್ಮ ಪ್ರತಿಭಟನೆ 7 ತಿಂಗಳು ಪೂರ್ಣಗೊಳಿಸಲಿದೆ. ಈ ಸರ್ವಾಧಿಕಾರಿ ವಾತಾವರಣದಲ್ಲಿ ಕೃಷಿಯ ಜೊತೆಗೆ ಜನರ ಪ್ರಜಾಪ್ರಭುತ್ವ ಹಕ್ಕುಗಳು ಕೂಡ ದಾಳಿಗೊಳಗಾಗುತ್ತಿವೆ. ಇದು ಅಘೋಷಿತ ತುರ್ತು ಪರಿಸ್ಥಿತಿ’’ ಎಂದು ಸಿಂಗ್ ಹೇಳಿದ್ದಾರೆ.







