ಕನ್ನಡ ಸಾಹಿತ್ಯ ಪರಿಷತ್‍ನ ದತ್ತಿ ಪ್ರಶಸ್ತಿಗೆ ಪುಸ್ತಕ ಆಹ್ವಾನ
ಬೆಂಗಳೂರು, ಜೂ.14: 2020ನೆ ಸಾಲಿನಲ್ಲಿ ಪ್ರಕಟವಾದ ಕನ್ನಡ ಪುಸ್ತಕಗಳಿಗೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿರುವ ವಿವಿಧ ದತ್ತಿನಿಧಿ ಪ್ರಶಸ್ತಿಗಳಿಗೆ ಪುಸ್ತಕಗಳನ್ನು ಕಳುಹಿಸಲು ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಪುಸ್ತಕಗಳನ್ನು ಕಳುಹಿಸಲು ಜು.5 ಕೊನೆಯ ದಿನವಾಗಿರುತ್ತದೆ.
ಕನ್ನಡ ಸಾಹಿತ್ಯ ಪರಿಷತ್ ಸುಮಾರು 48 ದತ್ತಿನಿಧಿ ಪ್ರಶಸ್ತಿಗೆ ಪುಸ್ತಕಗಳನ್ನು ಆಹ್ವಾನಿಸಲಾಗಿದ್ದು, ವಿಜ್ಞಾನ ತಂತ್ರಜ್ಞಾನ, ರೈತ, ಕೃಷಿ, ಸಂಶೋಧನೆ, ಕಾದಂಬರಿ, ಸಣ್ಣಕತೆ, ಮಕ್ಕಳ ಸಾಹಿತ್ಯ, ಮನೋ ವಿಜ್ಞಾನ, ಮಹಿಳಾ ಬರಹ, ಉದಯೋನ್ಮುಖ ಮಹಿಳಾ ಬರಹಗಾರರು, ವೈಚಾರಿಕ ಕೃತಿ, ಗದ್ಯಕೃತಿ, ಹಾಸ್ಯ ಸಾಹಿತ್ಯ, ಚೊಚ್ಚಲ ಕೃತಿ ಸೇರಿ ವಿವಿಧ ಪ್ರಕಾರಗಳ ಕೃತಿಗಳಿಗೆ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ದತ್ತಿ ಪ್ರಶಸ್ತಿಗಾಗಿ ಅರ್ಜಿ ಹಾಕುವವರು ತಮ್ಮ ಮೂರು ಕೃತಿಗಳನ್ನು ಗೌರವ ಕಾರ್ಯದರ್ಶಿ, ಕನ್ನಡ ಸಾಹಿತ್ಯ ಪರಿಷತ್, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂ.18ಕ್ಕೆ ಜು.5ರೊಳಗೆ ತಲುಪುವಂತೆ ಕಳುಹಿಸಿಕೊಡಬೇಕು. ಪಿಎಚ್‍ಡಿ ಗ್ರಂಥಗಳನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ. ಪುಸ್ತಕಗಳನ್ನು ಕನ್ನಡ ಸಾಹಿತ್ಯ ಪರಿಷತ್, ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ ಬೆಂ.18 ಇಲ್ಲಿಗೆ ಕಳುಹಿಸಬೇಕು. ದತ್ತಿ ಪ್ರಶಸ್ತಿಗಳಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು www.kasapa.in ನಲ್ಲಿ ಪಡೆದುಕೊಳ್ಳಬಹುದು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.







