ಇಟಲಿ ನೌಕಾಪಡೆಯ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಪಡಿಸಿದ ಸುಪ್ರೀಂ ಕೋರ್ಟ್
ಮೀನುಗಾರರ ಹತ್ಯೆ ಪ್ರಕರಣ

ಹೊಸದಿಲ್ಲಿ: ಕೇರಳದ ಕರಾವಳಿಯಲ್ಲಿ 2012 ರ ಫೆಬ್ರವರಿಯಲ್ಲಿ ಭಾರತದ ಇಬ್ಬರು ಮೀನುಗಾರರನ್ನು ಹತ್ಯೆಗೈದ ಆರೋಪದಡಿ ಇಟಲಿ ನೌಕಾಪಡೆಯ ಇಬ್ಬರು ನಾವಿಕರ ವಿರುದ್ಧ ಭಾರತದಲ್ಲಿ ದಾಖಲಾಗಿರುವ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಪಡಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಆದೇಶಿಸಿದೆ.
ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಹಾಗೂ ಎಂ. ಆರ್. ಷಾ ಅವರನ್ನೊಳಗೊಂಡ ರಜಾ ಕಾಲದ ಪೀಠವು ಇಬ್ಬರು ಇಟಲಿ ನಾವಿಕರಾದ ಮಾಸ್ಸಿಮಿಲಾನೊ ಲ್ಯಾಟೊರೆ ಹಾಗೂ ಸಾಲ್ವಟೋರ್ ಗಿರೊನ್ ವಿರುದ್ಧ ದಾಖಲಾಗಿದ್ದ ಎಫ್ ಐಆರ್ ವಜಾಗೊಳಿಸಿ, ಅವರ ವಿರುದ್ಧದ ವಿಚಾರಣೆಯನ್ನು ರದ್ದುಪಡಿಸಿತು.
ಭಾರತ ಒಪ್ಪಿಕೊಂಡಿರುವ ಅಂತರರಾಷ್ಟ್ರೀಯ ನ್ಯಾಯಮಂಡಳಿಯ ತೀರ್ಪಿನ ಪ್ರಕಾರ, ಇಟಲಿ ಸರಕಾರವು ಈ ಪ್ರಕರಣದಲ್ಲಿ ಹೆಚ್ಚಿನ ತನಿಖೆಯನ್ನು ಪುನರಾರಂಭಿಸುತ್ತದೆ ಎಂದು ನ್ಯಾಯಪೀಠ ಹೇಳಿದೆ.
ನ್ಯಾಯಾಲಯದ ಆದೇಶದಂತೆ ಇಟಲಿ ಸರಕಾರ ಈಗಾಗಲೇ ಮೀನುಗಾರರ ಕುಟುಂಬಕ್ಕೆ 10 ಕೋ.ರೂ. ಪರಿಹಾರ ಪಾವತಿಸಿದೆ. ಇಷ್ಟೊಂದು ಮೊತ್ತ ನೀಡಿರುವುದು ಸಮಂಜಸ ಹಾಗೂ ಸಮರ್ಪಕವಾಗಿದೆ ಎಂದು ನ್ಯಾಯಾಲಯ ಹೇಳಿದೆ.