ದ.ಕ. ಜಿಲ್ಲೆ : ಕೋವಿಡ್‌ಗೆ 5 ಬಲಿ; 482 ಮಂದಿಗೆ ಕೊರೋನ ಪಾಸಿಟಿವ್
ಬ್ಲ್ಯಾಕ್ ಫಂಗಸ್‌ಗೆ ಓರ್ವ ಬಲಿ

ಮಂಗಳೂರು, ಜೂ.15: ದ.ಕ. ಜಿಲ್ಲೆಯಲ್ಲಿ ಮಂಗಳವಾರ 5 ಮಂದಿ ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಕೋವಿಡ್‌ಗೆ ಬಲಿಯಾದವರ ಸಂಖ್ಯೆ 988ಕ್ಕೇರಿದೆ. ಅಲ್ಲದೆ ಮಂಗಳವಾರ ಜಿಲ್ಲೆಯಲ್ಲಿ 482 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಪಾಸಿಟಿವಿಟಿ ಪ್ರಮಾಣ ಶೇ. 5.74 ಇದೆ. ಇದರೊಂದಿಗೆ ಈವರೆಗೆ ಜಿಲ್ಲೆಯಲ್ಲಿ ಕೊರೋನ ಸೋಂಕಿಗೊಳಗಾದವರ ಸಂಖ್ಯೆ 84,875ಕ್ಕೇರಿದೆ.
ಮಂಗಳವಾರ 651 ಮಂದಿ ಕೊರೋನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಅದರಂತೆ ಈವರೆಗೆ ಗುಣಮುಖರಾದವರ ಸಂಖ್ಯೆ 77,107ಕ್ಕೇರಿದೆ. ಸದ್ಯ ಜಿಲ್ಲೆಯಲ್ಲಿ 6,780 ಸಕ್ರಿಯ ಪ್ರಕರಣವಿದೆ. ಜಿಲ್ಲೆಯಲ್ಲಿ ಈವರಗೆ 9,14,127 ಮಂದಿಯ ದ್ರವ ಪರೀಕ್ಷೆ ಮಾಡಲಾಗಿದೆ. ಆ ಪೈಕಿ 8,29,252 ಮಂದಿಯ ವರದಿ ನೆಗೆಟಿವ್ ಬಂದಿದೆ.
ದಂಡ ವಸೂಲಿ: ಮಾಸ್ಕ್ ನಿಯಮ ಉಲ್ಲಂಘಿಸಿದ 69,731 ಮಂದಿಯಿಂದ 84,17,417 ರೂ. ದಂಡ ವಸೂಲು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬ್ಲ್ಯಾಕ್ ಫಂಗಸ್‌ಗೆ ಓರ್ವ ಬಲಿ
ದ.ಕ. ಜಿಲ್ಲೆಯಲ್ಲಿ ಮಂಗಳವಾರ ಬ್ಲ್ಯಾಕ್ ಫಂಗಸ್ ಗೆ ಒಬ್ಬ ಬಲಿಯಾಗಿದ್ದಾರೆ. ಇದರೊಂದಿಗೆ ದ.ಕ.ಜಿಲ್ಲೆಯ ಇಬ್ಬರು ಮತ್ತು ಹೊರ ಜಿಲ್ಲೆಯ 14 ಮಂದಿಯ ಸಹಿತ ಬ್ಲ್ಯಾಕ್ ಫಂಗಸ್ ಗೆ ದ.ಕ.ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 16ಕ್ಕೇರಿದೆ.
ಮಂಗಳವಾರ ಬ್ಲ್ಯಾಕ್ ಫಂಗಸ್‌ಗೆ ಬಲಿಯಾದ ವ್ಯಕ್ತಿ ಉತ್ತರ ಕನ್ನಡ ಜಿಲ್ಲೆಯವರಾಗಿದ್ದು, ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲದೆ ಮಂಗಳವಾರ ಹೊಸದಾಗಿ 1 ಪ್ರಕರಣ ಪತ್ತೆಯಾಗಿದೆ. ಹೊಸತಾಗಿ ಪತ್ತೆಯಾದ ಪ್ರಕರಣವು ಚಿಕ್ಕಮಗಳೂರು ಜಿಲ್ಲೆಗೆ ಸಂಬಂಧಿಸಿದ್ದಾಗಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದ.ಕ.ಜಿಲ್ಲೆಯಲ್ಲಿ ಸದ್ಯ 38 ಬ್ಲ್ಯಾಕ್ ಫಂಗಸ್ ಸಕ್ರಿಯ ಪ್ರಕರಣಗಳು ಇದೆ. ಇದರಲ್ಲಿ 7 ದ.ಕ.ಜಿಲ್ಲೆಗೆ ಮತ್ತು 31 ಪ್ರಕರಣಗಳು ಹೊರಜಿಲ್ಲೆಗೆ ಸಂಬಂಧಿಸಿದ್ದಾಗಿದೆ. ಮಂಗಳವಾರ ಚಿಕಿತ್ಸೆಯಿಂದ ಗುಣಮುಖರಾದ 7 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಅದರೊಂದಿಗೆ ಈವರೆಗೆ ಗುಣಮುಖರಾಗಿ ಮನೆಗೆ ಮರಳಿದವರ ಸಂಖ್ಯೆ 20ಕ್ಕೇರಿದೆ. ಅದರಲ್ಲಿ ದ.ಕ.ಜಿಲ್ಲೆಯ ನಾಲ್ಕು ಮತ್ತು ಹೊರ ಜಿಲ್ಲೆಯ 16 ಮಂದಿ ಸೇರಿದ್ದಾರೆ.







