ಭಾರತ ಹಜ್ ಸಮಿತಿಯಿಂದ ಹಜ್ ಯಾತ್ರೆಯ 2021ರ ಎಲ್ಲ ಅರ್ಜಿ ರದ್ದು

ಹೊಸದಿಲ್ಲಿ, ಜೂ. 15: ಕೊರೋನ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ವಿದೇಶಗಳಿಂದ ಬರುವ ಜನರಿಗೆ ಸೌದಿ ಅರೇಬಿಯಾ ನಿಷೇಧ ವಿಧಿಸಿರುವುದರಿಂದ ಭಾರತದ ಹಜ್ ಸಮಿತಿ ಮಂಗಳವಾರ ಹಜ್ 2021ಕ್ಕೆ ನಿಗದಿಪಡಿಸಿದ್ದ ಎಲ್ಲ ಅರ್ಜಿಗಳನ್ನು ರದ್ದುಗೊಳಿಸಿದೆ ಎಂದು ತಿಳಿದು ಬಂದಿದೆ.
ಕೊರೋನ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ಸರಕಾರ ವಿದೇಶಿಗರಿಗೆ ಹಜ್ ಯಾತ್ರೆಗೆ ಅವಕಾಶ ನೀಡಿಲ್ಲ. ತನ್ನ ದೇಶದ ಪ್ರಜೆಗಳು ಹಾಗೂ ನಿವಾಸಿಗಳಿಗೆ ಮಾತ್ರ ಸೀಮಿತ ಸಂಖ್ಯೆಯಲ್ಲಿ ಹಜ್ ಯಾತ್ರೆ ಕೈಗೊಳ್ಳಲು ಅವಕಾಶ ನೀಡಿದೆ. ಆದುದರಿಂದ ಹಜ್ 2021ರ ಎಲ್ಲ ಅರ್ಜಿಯನ್ನು ರದ್ದುಪಡಿಸಲು ನಿರ್ಧರಿಸಲಾಗಿದೆ ಎಂದು ಭಾರತದ ಹಜ್ ಸಮಿತಿ ಸುತ್ತೋಲೆಯಲ್ಲಿ ತಿಳಿಸಿದೆ.
ಜೂನ್ 12ರಂದು ಸೌದಿ ಅರೇಬಿಯಾದ ಹಜ್ ಹಾಗೂ ಉಮ್ರಾ ಸಚಿವಾಲಯ, ಕೊರೋನ ಸಾಂಕ್ರಾಮಿಕ ರೋಗದ ಕಾರಣಕ್ಕೆ ಈ ವರ್ಷ ಎಲ್ಲ ಲಸಿಕೆ ಹಾಕಿಸಿಕೊಂಡ ದೇಶದ 18ರಿಂದ 65 ವರ್ಷದ ಒಳಗಿನ ಪ್ರಾಯದ 60 ಸಾವಿರ ಯಾತ್ರಿಕರಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಿತ್ತು. ಕಳೆದ ವರ್ಷ ಕೋವಿಡ್ ನಿಂದಾಗಿ ಹಜ್ ಯಾತ್ರೆಯಲ್ಲಿ ಕಡಿಮೆ ಸಂಖ್ಯೆಯಲ್ಲಿ ಯಾತ್ರಿಕರು ಪಾಲ್ಗೊಂಡಿದ್ದರು. ಈ ವರ್ಷವೂ ಯಾತ್ರಿಕರ ಸಂಖ್ಯೆಯನ್ನು ಸೀಮಿತಗೊಳಿಸಲಾಗಿದೆ ಎಂದು ಸೌದಿ ಅರೇಬಿಯಾ ಘೋಷಿಸಿದೆ.







