ಮಧ್ಯಂತರ ಮುಖ್ಯ ನಿಯಮ ಪಾಲನೆ ಅಧಿಕಾರಿಯನ್ನು ನೇಮಿಸಿದ ಟ್ವಿಟರ್

ಹೊಸದಿಲ್ಲಿ: ಮಧ್ಯಂತರ ಮುಖ್ಯ ನಿಯಮ ಪಾಲನೆ ಅಧಿಕಾರಿಯನ್ನು ನೇಮಕ ಮಾಡಲಾಗಿದೆ ಹಾಗೂ ಅಧಿಕಾರಿಯ ವಿವರಗಳನ್ನು ಶೀಘ್ರದಲ್ಲೇ ಐಟಿ ಸಚಿವಾಲಯ ದೊಂದಿಗೆ ಹಂಚಿಕೊಳ್ಳಲಾಗುವುದು ಎಂದು ಟ್ವಿಟರ್ ಸಂಸ್ಥೆ ಮಂಗಳವಾರ ತಿಳಿಸಿದೆ.
ಹೊಸ ಐಟಿ ನಿಯಮಗಳನ್ನು 'ತಕ್ಷಣ' ಪಾಲಿಸಲು ಸರಕಾರವು ಇತ್ತೀಚೆಗೆ ಕೊನೆಯ ಅವಕಾಶವನ್ನು ನೀಡಿ ಟ್ವಿಟರ್‌ಗೆ ನೋಟಿಸ್ ನೀಡಿತ್ತು ಹಾಗೂ ಮಾನದಂಡಗಳನ್ನು ಪಾಲಿಸಲು ವಿಫಲವಾದರೆ ಟ್ವಿಟರ್, ಐಟಿ ಕಾಯ್ದೆಯಡಿ ಹೊಣೆಗಾರಿಕೆಯಿಂದ ವಿನಾಯಿತಿ ಕಳೆದುಕೊಳ್ಳುತ್ತದೆ ಎಂದು ಎಚ್ಚರಿಸಿದೆ.
ಹೊಸ ಐಟಿ ನಿಯಮಗಳ ಪ್ರಕಾರ ಮುಖ್ಯ ಪಾಲನೆ ಅಧಿಕಾರಿಯ ನೇಮಕವನ್ನು ಅಂತಿಮಗೊಳಿಸುವ ಹಂತದಲ್ಲಿದೆ ಹಾಗೂ ಒಂದು ವಾರದೊಳಗೆ ಹೆಚ್ಚುವರಿ ವಿವರಗಳನ್ನು ಸಲ್ಲಿಸುವುದಾಗಿ ಟ್ವಿಟರ್ ಕಳೆದ ವಾರ ಭಾರತ ಸರಕಾರಕ್ಕೆ ಭರವಸೆ ನೀಡಿತ್ತು.
ಹೊಸ ಮಾರ್ಗಸೂಚಿಗಳನ್ನು ಅನುಸರಿಸಲು ಕಂಪನಿಯು ಎಲ್ಲ ಪ್ರಯತ್ನಗಳನ್ನು ಮುಂದುವರೆಸಿದೆ. ಮಧ್ಯಂತರ ಮುಖ್ಯ ಪಾಲನೆ ಅಧಿಕಾರಿಯನ್ನು ಉಳಿಸಿಕೊಳ್ಳಲಾಗಿದ್ದು, ಶೀಘ್ರದಲ್ಲೇ ವಿವರಗಳನ್ನು ಸಚಿವಾಲಯದೊಂದಿಗೆ ಹಂಚಿಕೊಳ್ಳಲಾಗುವುದು ಎಂದು ಟ್ವಿಟರ್ ವಕ್ತಾರರು ಮಂಗಳವಾರ ಹೇಳಿದ್ದಾರೆ.