ಮಂದಿರದ ಸುರಕ್ಷತೆಗಾಗಿ ಸುತ್ತಮುತ್ತಲಿನ ಆಸ್ತಿ ಖರೀದಿ: ಚಂಪತ್‍ರಾಯ್

ಬೆಂಗಳೂರು, ಜೂ.15: ಶ್ರೀರಾಮ ಜನ್ಮ ಭೂಮಿ ಮಂದಿರದ ಪ್ರದಕ್ಷಿಣಾ ಮಾರ್ಗವನ್ನು ವಾಸ್ತು ಪ್ರಕಾರ ಸರಿಪಡಿಸಲು, ಪರಿಸರದ ಪೂರ್ವ ಹಾಗೂ ಪಶ್ಚಿಮ ದಿಕ್ಕಿನಲ್ಲಿ ಯಾತ್ರಿಗಳ ಓಡಾಟಕ್ಕೆ ಅನುಕೂಲವಾಗುವಂತೆ ಖಾಲಿ ಮೈದಾನ ಕಲ್ಪಿಸಲು ಹಾಗೂ ಮಂದಿರದ ಸುರಕ್ಷತೆಗಾಗಿ ಪರಿಸರದ ಸುತ್ತಮುತ್ತಲಿನ ಮಂದಿರಗಳು ಹಾಗೂ ಮನೆಗಳನ್ನು ಖರೀದಿಸುವುದು ನಮ್ಮ ಅನಿವಾರ್ಯ ಅವಶ್ಯಕತೆಯಾಗಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತರಾಯ್ ತಿಳಿಸಿದ್ದಾರೆ.
ಈ ರೀತಿ ಖರೀದಿಸಿದ ಮಂದಿರಗಳಿಗೆ ಬೇರೆಡೆ ಸ್ಥಳಾವಕಾಶ ಕಲ್ಪಿಸುವ ಉದ್ದೇಶದಿಂದ ಅಯೋಧ್ಯೆಯಲ್ಲಿ ಭೂಮಿ ಖರೀದಿಸಲಾಗುತ್ತಿದೆ. ಇಂತಹ ಖರೀದಿ ವ್ಯವಹಾರವು ಪರಸ್ಪರ ಮಾತುಕತೆ ಹಾಗೂ ಪೂರ್ಣ ಸಹಮತಿಯ ಆಧಾರದ ಮೇಲೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಪರಸ್ಪರ ಸಹಮತಿಯ ನಂತರ ಸಹಮತಿ ಪತ್ರದ ಮೇಲೆ ಸಹಿ ಮಾಡಲಾಗುತ್ತದೆ. ಸರಕಾರದ ಶುಲ್ಕ ಹಾಗೂ ಸ್ಟಾಂಪ್ ಖರೀದಿ ಎಲ್ಲವೂ ಆನ್‍ಲೈನ್ ಮೂಲಕ ನಡೆಯುತ್ತಿದೆ. ಸಹಮತಿ ಪತ್ರದಲ್ಲಿರುವಂತೆ ಭೂಮಿಯ ಬೆಲೆಯನ್ನು ಮಾರಾಟಗಾರರ ಬ್ಯಾಂಕ್ ಖಾತೆಗೆ ನೇರ ವರ್ಗಾವಣೆ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.
2019 ನವೆಂಬರ್ 9 ರಂದು ಶ್ರೀರಾಮ ಜನ್ಮ ಭೂಮಿಯ ಕುರಿತಾದ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ನಂತರ ಅಯೋಧ್ಯೆಯಲ್ಲಿ ಭೂಮಿ ಖರೀದಿಸಲು ದೇಶದ ಮೂಲೆಮೂಲೆಗಳಿಂದ ಅಸಂಖ್ಯ ಜನರು ಆಗಮಿಸುತ್ತಿದ್ದಾರೆ. ಉತ್ತರ ಪ್ರದೇಶ ಸರಕಾರವೂ ಅಯೋಧ್ಯೆಯ ವಿಕಾಸಕ್ಕಾಗಿ ದೊಡ್ಡ ಪ್ರಮಾಣದಲ್ಲಿ ಭೂಮಿ ಖರೀದಿಸುತ್ತಿದೆ. ಇದರ ಪರಿಣಾಮವಾಗಿ ಇದ್ದಕ್ಕಿದ್ದಂತೆ ಭೂಮಿಯ ಬೆಲೆ ಗಗನಕ್ಕೇರಿದೆ. ಪತ್ರಿಕೆಯಲ್ಲಿ ಚರ್ಚೆ ನಡೆಯುತ್ತಿರುವ ಭೂ ಪ್ರದೇಶವು ರೇಲ್ವೆ ನಿಲ್ದಾಣದ ಸಮೀಪದ ಬಹುಮೂಲ್ಯ ಸ್ಥಾನವಾಗಿದೆ ಎಂದು ಅವರು ತಿಳಿಸಿದ್ದಾರೆ.
ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರವು ಇಲ್ಲಿಯವರೆಗೆ ಎಲ್ಲ ಭೂಮಿಗಳನ್ನು ಹೊರಗಡೆ ಮಾರುಕಟ್ಟೆಗಿಂತ ಅತ್ಯಂತ ಕಡಿಮೆ ಬೆಲೆಯಲ್ಲಿ ಖರೀದಿಸಿದೆ. ಉಲ್ಲೇಖಿಸಿರುವ ಭೂಮಿಯನ್ನು ಖರೀದಿಸಲು ಮಾರಾಟಗಾರರು ಬಹಳ ವರ್ಷಗಳ ಮೊದಲು ಒಪ್ಪಂದ ಪತ್ರ (2011 ರಲ್ಲಿ 2 ಕೋಟಿಗೆ) ನೋಂದಾವಣೆ ಮಾಡಿಕೊಂಡಿದ್ದರೂ ಸಹ ಅನ್ಯ ಕಾರಣಗಳಿಂದ ಖರೀದಿ ಪತ್ರ ಮಾಡಿಕೊಂಡಿರಲಿಲ್ಲ. ಇದೇ ಮಾರ್ಚ್ 18 ರಂದು ಅದೇ ಬೆಲೆಗೆ ಖರೀದಿ ಪತ್ರ ಮಾಡಿಕೊಂಡ ನಂತರ ನಮ್ಮ ಸಂಸ್ಥೆಯ ಜೊತೆಗೆ ಒಪ್ಪಂದ ಪತ್ರ ಮಾಡಿಕೊಡಲಾಗಿದೆ ಎಂದು ಚಂಪತ್‍ರಾಯ್ ಹೇಳಿದ್ದಾರೆ.
ಕೆಲವು ರಾಜಕೀಯ ವ್ಯಕ್ತಿಗಳು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಈ ವಿಷಯವನ್ನು ಮಾಧ್ಯಮಗಳ ಮೂಲಕ ಭ್ರಾಮಕ ಪ್ರಚಾರ ನೀಡಿ ಸಮಾಜವನ್ನು ಉದ್ವಿಗ್ನಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಶ್ರೀರಾಮ ಅವರಿಗೆ ಸದ್ಬುದ್ಧಿ ನೀಡಲಿ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







