ಹಜ್ ಯಾತ್ರೆಗೆ 4,50,000 ಮಂದಿ ನೋಂದಣಿ: 60,000 ಮಂದಿಗೆ ಅವಕಾಶ

ರಿಯಾದ್ (ಸೌದಿ ಅರೇಬಿಯ), ಜೂ. 15: ಮುಂಬರುವ ಹಜ್ ಯಾತ್ರೆಗೆ 4,50,000ಕ್ಕೂ ಅಧಿಕ ಮಂದಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ ಎಂದು ಸೌದಿ ಅರೇಬಿಯದ ಹಜ್ ಮತ್ತು ಉಮ್ರಾ ಸಚಿವಾಲಯ ತಿಳಿಸಿದೆ.
ಅರ್ಜಿದಾರರ ಪೈಕಿ ಸುಮಾರು 60 ಶೇಕಡ ಪುರುಷರು ಹಾಗೂ ಉಳಿದವರು ಮಹಿಳೆಯರು. ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, ಈ ಬಾರಿಯ ಹಜ್ ಯಾತ್ರೆಯನ್ನು ತನ್ನ ಪ್ರಜೆಗಳು ಮತ್ತು ನಿವಾಸಿಗಳೀಗೆ ಮಾತ್ರ ಸೀಮಿತಗೊಳಿಸಲು ಸೌದಿ ಅರೇಬಿಯ ನಿರ್ಧರಿಸಿದೆ. ಈ ಬಾರಿ ಹಜ್ ನಲ್ಲಿ ಗರಿಷ್ಠ 60,000 ಮಂದಿ ಭಾಗವಹಿಸಬಹುದು ಎಂದು ಅದು ಈಗಾಗಲೇ ಹೇಳಿದೆ.
ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ಲಸಿಕೆ ತೆಗೆದುಕೊಂಡ ಹಾಗೂ ಯಾವುದೇ ಗಂಭೀರ ಕಾಯಿಲೆಗಳಿಲ್ಲದ 18ರಿಂದ 65 ವರ್ಷದವರೆಗಿನ ವ್ಯಕ್ತಿಗಳು ಮಾತ್ರ ಈ ಬಾರಿಯ ಹಜ್ ನಲ್ಲಿ ಭಾಗವಹಿಸಬಹುದಾಗಿದೆ.
ಸಚಿವಾಲಯವು ಮೂರು ಹಜ್ ಪ್ಯಾಕೇಜ್ ಗಳನ್ನೂ ಘೋಷಿಸಿದೆ. ಮೊದಲ ಪ್ಯಾಕೇಜ್ ಗೆ 12,113 ರಿಯಾಲ್ ದರ ನಿಗದಿಪಡಿಸಿದರೆ, ಎರಡನೇ ಪ್ಯಾಕೇಜ್ ಗೆ 14,381 ರಿಯಾಲ್ ಬೆಲೆ ವಿಧಿಸಿದೆ. ಮೂರನೇ ಹಾಗೂ ದುಬಾರಿ ಪ್ಯಾಕೇಜ್ ನ ಬೆಲೆ 16,560 ರಿಯಾಲ್. ಈ ಮೂರೂ ಪ್ಯಾಕೇಜ್ ಗಳಿಗೆ ತೆರಿಗೆಗಳನ್ನು ಹೆಚ್ಚುವರಿಯಾಗಿ ಸಂಗ್ರಹಿಸಲಾಗುತ್ತದೆ.







