ದೇವಾಂಗನಾ, ನತಾಶಾ ಹಾಗೂ ಆಸಿಫ್ ಗೆ ಜಾಮೀನು: ಹೈಕೋರ್ಟ್ ಆದೇಶ ವಿರೋಧಿಸಿ ಸುಪ್ರೀಂ ಮೆಟ್ಟಿಲೇರಿದ ದಿಲ್ಲಿ ಪೊಲೀಸರು

Photo: Thenewsminute
ಹೊಸದಿಲ್ಲಿ: ವಿದ್ಯಾರ್ಥಿ ಹೋರಾಟಗಾರ್ತಿಯರಾದ ದೇವಾಂಗನ ಕಲಿಟ, ನತಾಶ ನರ್ವಾಲ್ ಹಾಗೂ ಆಸಿಫ್ ಇಕ್ಬಾಲ್ ತನ್ಹಾ ಅವರಿಗೆ ಕಳೆದ ವರ್ಷದ ಫೆಬ್ರವರಿಯಲ್ಲಿ ಈಶಾನ್ಯ ದಿಲ್ಲಿಯಲ್ಲಿ ನಡೆದ ಹಿಂಸಾಚಾರ ಪ್ರಕರಣದಲ್ಲಿ ಜಾಮೀನು ಮಂಜೂರುಗೊಳಿಸಿ ದಿಲ್ಲಿ ಹೈಕೋರ್ಟ್ ಮಂಗಳವಾರ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ದಿಲ್ಲಿ ಪೊಲೀಸರು ಸುಪ್ರೀಂ ಕೋರ್ಟ್ ಕದ ತಟ್ಟಿದ್ದಾರೆ.
ಮೂವರು ಹೋರಾಟಗಾರರೂ ಮೇ 2020ರಿಂದ ಜೈಲಿನಲ್ಲಿದ್ದು ಹಿಂಸಾಚಾರ ಕುರಿತಾದ ಇತರ ಪ್ರಕರಣಗಳಲ್ಲಿ ಅವರಿಗೆ ಈಗಾಗಲೇ ಜಾಮೀನು ಲಭಿಸಿರುವುದರಿಂದ ಬಿಡುಗಡೆಗೊಳ್ಳಲಿದ್ದಾರೆ.
ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧದ ಪ್ರತಿಭಟನೆಗಳ ವೇಳೆ ನಡೆದ ಹಿಂಸಾಚಾರದ ಹಿಂದೆ ಇದ್ದ ದೊಡ್ಡ ಮಟ್ಟದ ಷಡ್ಯಂತ್ರದಲ್ಲಿ ಈ ಮೂವರು ಶಾಮೀಲಾಗಿದ್ದರು ಎಂದು ದಿಲ್ಲಿ ಪೊಲೀಸರು ಅವರ ವಿರುದ್ಧ ಹೊರಿಸಿದ್ದ ಆರೋಪ ಕುರಿತಾದ ಪ್ರಕರಣದಲ್ಲಿ ಮಂಗಳವಾರ ಮೂವರಿಗೂ ಜಾಮೀನು ದೊರಕಿದೆ. ಮೂವರ ವಿರುದ್ಧವೂ ಅಕ್ರಮ ಚಟುವಟಿಕೆಗಳ ನಿಯಂತ್ರಣ ಕಾಯಿದೆಯನ್ನು ಈಗಾಗಲೇ ಹೇರಲಾಗಿದೆ.
ಕಲಿಟ ಮತ್ತು ನತಾಶ ಅವರು ಮಹಿಳಾ ಹಕ್ಕುಗಳ ಸಂಘಟನೆ ಪಿಂಜ್ರಾ ತೋಡ್ ಸದಸ್ಯೆಯರಾಗಿದ್ದರೆ ತನ್ಹಾ ಅವರು ದಿಲ್ಲಿಯ ಜಾಮಿಯಾ ಮಿಲ್ಲಿಯಾ ವಿವಿ ವಿದ್ಯಾರ್ಥಿಯಾಗಿದ್ದಾರೆ.