ಗಾಝಿಯಾಬಾದ್ ಘಟನೆ: ಸಂತ್ರಸ್ತ ವೃದ್ಧ ತಾಯತ ಮಾರಾಟ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಕುಟುಂಬ

ಗಾಝಿಯಾಬಾದ್: ಮಸೀದಿಗೆ ತೆರಳುತ್ತಿದ್ದ ಅಬ್ದುಲ್ ಸಮದ್ ಎಂಬ ವೃದ್ಧನನ್ನು ಗುಂಪೊಂದು ಅಪಹರಿಸಿ, ಹಲ್ಲೆಗೈದು, ಗಡ್ಡ ಕತ್ತರಿಸಿ ಜೈ ಶ್ರೀ ರಾಮ್ ಹೇಳುವಂತೆ ಬಲವಂತಪಡಿಸಿದೆ ಎನ್ನಲಾದ ಘಟನೆಗೆ ಸಂಬಂಧಿಸಿದಂತೆ ಟ್ವೀಟ್‍ಗಳ ಮೂಲಕ ಮತೀಯ ಭಾವನೆಗಳನ್ನು ಕೆರಳಿಸಲಾಗಿದೆ ಎಂದು ಆರೋಪಿಸಿ ಗಾಝಿಯಾಬಾದ್ ಪೊಲೀಸರು ಕೆಲ ಪತ್ರಕರ್ತರು, ಟ್ವಿಟ್ಟರ್ ಸಹಿತ ಎಂಟು ಮಂದಿಯ ವಿರುದ್ಧ ಎಫ್‍ಐಆರ್ ದಾಖಲಿಸಿದ ಬೆನ್ನಿಗೇ ಸಮದ್ ಕುಟುಂಬ ಪ್ರತಿಕ್ರಿಯಿಸಿ ಆತ ತಾಯತಗಳನ್ನು ಮಾರಾಟ ಮಾಡುತ್ತಿದ್ದರು ಎಂಬ ಆರೋಪಗಳನ್ನು ನಿರಾಕರಿಸಿದೆ.
"ನನ್ನ ತಂದೆ ತಾಯತಗಳನ್ನು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿರುವುದು ಸುಳ್ಳು. ನಮ್ಮ ಕುಟುಂಬದಲ್ಲಿ ಯಾರೂ ಈ ಕೆಲಸ ಮಾಡುತ್ತಿಲ್ಲ. ನಾವು ಬಡಗಿಗಳು. ಪೊಲೀಸರು ಸರಿಯಾದ ಮಾತುಗಳನ್ನು ಹೇಳುತ್ತಿಲ್ಲ, ಅವರು ತನಿಖೆ ನಡೆಸಿ ಸಾಬೀತು ಪಡಿಸಲಿ" ಎಂದು ಸಮದ್ ಪುತ್ರ ಬಬ್ಲೂ ಸೈಫೀ ಸುದ್ದಿ ವಾಹಿನಿಯೊಂದರ ಜತೆ ಮಾತನಾಡುತ್ತಾ ಹೇಳಿದ್ದಾರೆ.
ಅದೃಷ್ಟ ಖುಲಾಯಿಸಲಿದೆ ಎಂದು ಹೇಳಿ ಸಮದ್ ಆರೋಪಿಗಳಲ್ಲೊಬ್ಬಾತನಿಗೆ ತಾಯತ ನೀಡಿದ್ದರೂ ಆತನ ಕುಟುಂಬದಲ್ಲಿ ಕೆಟ್ಟ ಘಟನೆಯೊಂದು ನಡೆದ ಬಳಿಕ ಆಕ್ರೋಶದಿಂದ ಈ ದಾಳಿ ನಡೆದಿದೆ ಎಂದು ಪೊಲೀಸರು ಈ ಹಿಂದೆ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
"ಜೂನ್ 6ರಂದು ಲೋನಿ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಆರೋಪಿಗಳು ತಂದೆಯನ್ನು ನಿರ್ಜನ ಸ್ಥಳಕ್ಕೆ ಕರೆದೊಯ್ದು ಹಲ್ಲೆ ನಡೆಸಿ ಗಡ್ಡ ಕತ್ತರಿಸಿದ್ದಾರೆ. ಆದರೆ ಅವರ ಜೀವ ಉಳಿದಿದೆ. ಅವರನ್ನು ಗಂಟೆಗಳ ಕಾಲ ಹಿಂಸಿಸಲಾಗಿದೆ" ಎಂದು ಆತ ವಿವರಿಸಿದ್ದಾರೆ.







