ರಾಜಸ್ಥಾನ: ಪಕ್ಷದ ಸಭೆಗಳಲ್ಲಿ ಭಾಗವಹಿಸುವುದನ್ನು ನಿಲ್ಲಿಸಿರುವ ಬಿಜೆಪಿ ಹಿರಿಯ ನಾಯಕಿ ವಸುಂಧರಾ ರಾಜೆ; ವರದಿ
ಪೋಸ್ಟರ್ ಗಳಲ್ಲೂ ಕಣ್ಮರೆಯಾದ ಮಾಜಿ ಮುಖ್ಯಮಂತ್ರಿ

ಹೊಸದಿಲ್ಲಿ: ರಾಜಸ್ಥಾನದ ಮಾಜಿ ಸಿಎಂ ಹಾಗೂ ಹಿರಿಯ ಬಿಜೆಪಿ ನಾಯಕಿ ವಸುಂಧರಾ ರಾಜೆ ಸಿಂಧಿಯಾ ಮತ್ತು ಬಿಜೆಪಿಯ ರಾಜ್ಯ ನಾಯಕತ್ವದ ನಡುವೆ ಎಲ್ಲವೂ ಸರಿಯಾಗಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ. ಪಕ್ಷದ ರಾಜ್ಯ ಘಟಕದ ಸಭೆಗಳಲ್ಲಿ ವಸುಂಧರಾ ಅವರು ಭಾಗವಹಿಸುವುದನ್ನು ನಿಲ್ಲಿಸಿದ್ದಾರೆ ಹಾಗೂ ಪಕ್ಷದ ಯಾವುದೇ ಚಟುವಟಿಕೆಗಳಲ್ಲಿ ಅವರು ಪಾಲ್ಗೊಳ್ಳುತ್ತಿಲ್ಲ ಎಂದು Theprint.in ವರದಿ ಮಾಡಿದೆ.
ಪಕ್ಷದ ರಾಜ್ಯ ನಾಯಕತ್ವ ನೂರಾರು ವರ್ಚುವಲ್ ಸಭೆಗಳನ್ನು ನಡೆಸಿದ್ದರೂ ವಸುಂಧರಾ ಹೆಚ್ಚಿನ ಸಭೆಗಳಿಗೆ ಗೈರಾಗಿದ್ದಾರೆ. ಬಿಜೆಪಿ ಉಪಾಧ್ಯಕ್ಷೆಯೂ ಆಗಿರಿವ ವಸುಂಧರಾ ಅವರ ಚಿತ್ರಗಳು ಜೈಪುರದಲ್ಲಿರುವ ಪಕ್ಷದ ಮುಖ್ಯ ಕಾರ್ಯಾಲಯದಲ್ಲಿ ಹಾಕಲಾಗಿರುವ ಪೋಸ್ಟರ್‍ಗಳಲ್ಲೂ ಕಾಣಿಸುತ್ತಿಲ್ಲ. ಈ ಪೋಸ್ಟರ್ ಗಳಲ್ಲಿ ಪ್ರಧಾನಿ ಮೋದಿ, ಪಕ್ಷಾಧ್ಯಕ್ಷ ಜೆಪಿ ನಡ್ಡಾ, ಗುಲಾಬ್ ಚಂದ್ ಕಟಾರಿಯಾ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಸತೀಶ್ ಪೂಣಿಯಾ ಅವರ ಚಿತ್ರಗಳಿವೆ.
ಜೂನ್9ರಂದು ರಾಜ್ಯ ಬಿಜೆಪಿ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರಕಾರದ ವಿರುದ್ಧ ಹ್ಯಾಶ್ ಟ್ಯಾಗ್ ಅಭಿಯಾನ ನಡೆಸಿದಾಗಲೂ ವಸುಂಧರಾ ಅವರು ಒಂದೇ ಒಂದು ಟ್ವೀಟ್ ಮಾಡಿರಲಿಲ್ಲ.
ಕೋವಿಡ್ ಸಾಂಕ್ರಾಮಿಕ ಸಂದರ್ಭ ಜನರಿಗೆ ಸಹಾಯ ಮಾಡಲು ಬಿಜೆಪಿ ಸೇವಾ ಹೀ ಸಂಘಟನ್ ಕಾರ್ಯಕ್ರಮ ನಡೆಸುತ್ತಿದ್ದರೆ ವಸುಂಧರಾ ಅವರು ಜನವರಿಯಲ್ಲಿ ತಮ್ಮದೇ ಆದ ವಸುಂಧರಾ ರಾಜೆ ʼಸಮರ್ಥನ್ ಮಂಚ್, ರಾಜಸ್ಥಾನ್' ರಚಿಸಿದ್ದು ಹಲವರ ಹುಬ್ಬೇರಲು ಕಾರಣವಾಗಿತ್ತು.
ಎಲ್ ಕೆ ಅಡ್ವಾಣಿ ಅವರ ಸಮೀಪವರ್ತಿ ಎಂದು ತಿಳಿಯಲಾಗಿರುವ ವಸುಂಧರಾ ಅವರು ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದಂದಿನಿಂದ ನಾಯಕತ್ವದ ಜತೆಗೆ ಉತ್ತಮ ಸಂಬಂಧ ಹೊಂದಿಲ್ಲ ಎಂದೇ ಹೇಳಲಾಗುತ್ತಿದೆ.