ʼಲಕ್ಷದ್ವೀಪವೇ ಪ್ರಥಮವಲ್ಲʼ: ಕೇಂದ್ರಾಡಳಿತ ಪ್ರದೇಶದ ಆಡಳಿತಗಾರನಾಗಿ ಗೊಂದಲಮಯ ದಾಖಲೆ ಹೊಂದಿರುವ ಪ್ರಫುಲ್ ಪಟೇಲ್
Photo: lakshadweep.gov.in
ಬೆಂಗಳೂರು,ಜೂ.16: ಲಕ್ಷದ್ವೀಪದ ಬಂಗಾರಂ ದ್ವೀಪದಲ್ಲಿರುವ ಸರಕಾರಿ ಸ್ವಾಮ್ಯದ ಖ್ಯಾತ ಪರಿಸರ-ಪ್ರವಾಸೋದ್ಯಮ ರೆಸಾರ್ಟ್ ಅನ್ನು ನಡೆಸಲು ಮೇ 13ರಂದು ಆನ್ಲೈನ್ ನಲ್ಲಿ ಕರೆಯಲಾಗಿದ್ದ ಟೆಂಡರ್ ಪೂರ್ವ ಸಭೆಯಲ್ಲಿ ಕೇವಲ ಐವರು ಉದ್ಯಮಿಗಳು ಭಾಗವಹಿಸಿದ್ದರು. ಸಭೆಯು ಈ ಉದ್ಯಮಿಗಳ ಪ್ರಶ್ನೆಗಳಿಗೆ ಉತ್ತರಿಸಬೇಕಿತ್ತು. ಆದರೆ ಸಭೆಯು ಹೆಸರಿಗಷ್ಟೇ ನಡೆದಿತ್ತೇ ಹೊರತು ಯಾವುದೇ ಅರ್ಥಪೂರ್ಣ ಕಲಾಪಗಳಿರಲಿಲ್ಲ.
ಮೇ 24ರಂದು ಇನ್ನೊಂದು ಆನ್ಲೈನ್ ಸಭೆಯನ್ನು ಕರೆಯಲಾಗಿದ್ದು, ಲಕ್ಷದ್ವೀಪ ಜಿಲ್ಲಾಧಿಕಾರಿ ಅಸ್ಕರ್ ಅಲಿ ಅಧ್ಯಕ್ಷತೆಯನ್ನು ವಹಿಸಿದ್ದರು ಮತ್ತು 16 ಉದ್ಯಮಿಗಳು ಪಾಲ್ಗೊಂಡಿದ್ದರು. ಟೆಂಡರ್ನ ಸ್ವರೂಪ ಆಸಕ್ತ ಉದ್ಯಮಿಗಳಿಗೆ ಒಪ್ಪಿಗೆಯಾಗದೆ ಸಭೆಯು ಅಂತ್ಯಗೊಂಡಿತ್ತು. ರೆಸಾರ್ಟ್ ನಡೆಸಲು ಅರ್ಥಹೀನ ಷರತ್ತುಗಳನ್ನು ಮುಂದಿರಿಸಲಾಗಿತ್ತು ಎಂದು ಓರ್ವ ಉದ್ಯಮಿ ಹೇಳಿದರೆ, ಟೆಂಡರ್ ತೋರಿಕೆಗೆ ಮಾತ್ರ ಕರೆಯುತ್ತಿರುವಂತಿದೆ, ರೆಸಾರ್ಟ್ ನಡೆಸಲು ಈಗಾಗಲೇ ಯಾರನ್ನೋ ನಿಗದಿ ಮಾಡಿರುವಂತಿದೆ ಎಂದು ಇನ್ನೋರ್ವ ಉದ್ಯಮಿ ಶಂಕೆ ವ್ಯಕ್ತಪಡಿಸಿದ್ದಾರೆ. ಇದು ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪದಲ್ಲಿ ಅಶಾಂತಿಯನ್ನು ಸೃಷ್ಟಿಸಿರುವ ಆಡಳಿತಗಾರ,ಪ್ರಧಾನಿ ನರೇಂದ್ರ ಮೋದಿಯವರ ಮನುಷ್ಯ ಎಂದೇ ಪರಿಗಣಿಸಲಾಗಿರುವ ಪ್ರಫುಲ್ ಖೋಡಾ ಪಟೇಲ್ ಅವರ ಆಡಳಿತದ ಒಂದು ಸ್ಯಾಂಪಲ್ ಅಷ್ಟೇ.
ಕೇಂದ್ರಾಡಳಿತ ಪ್ರದೇಶ ದಮನ್ ಮತ್ತು ದಿಯು ಹಾಗೂ ದಾದ್ರಾ ಮತ್ತು ನಗರಹವೇಲಿಯ ಆಡಳಿತಗಾರರಾಗಿ ಪಟೇಲ್ ಕೈಗೊಂಡಿದ್ದ ಕ್ರಮಗಳಿಗೂ ಲಕ್ಷದ್ವೀಪದ ಆಡಳಿತಗಾರರಾಗಿ ಅಧಿಕಾರ ಸ್ವೀಕರಿಸಿದ ಆರಂಭದ ಆರು ತಿಂಗಳುಗಳಲ್ಲಿ ಅವರ ಕ್ರಮಗಳಿಗೂ ಹೆಚ್ಚಿನ ವ್ಯತ್ಯಾಸಗಳಿಲ್ಲ. ಅಲ್ಲಿಯೂ ಪಟೇಲ್ ಸರಕಾರಿ ಸಿಬ್ಬಂದಿಗಳಿಗೆ ಕಡಿವಾಣ ಹಾಕಿದ್ದರು, ಶಾಲೆಗಳಲ್ಲಿಯ ಮಧ್ಯಾಹ್ನದೂಟ ಕಾರ್ಯಕ್ರಮದ ಮೇಲೆ ತನ್ನ ಸಾಂಸ್ಕೃತಿಕ ಮೌಲ್ಯಗಳನ್ನು ಹೇರಿದ್ದರು, ಗೂಂಡಾ ಕಾಯ್ದೆಯನ್ನು ಜಾರಿಗೆ ತಂದಿದ್ದರು. ಪರಿಸರದ ಬಗ್ಗೆ ಕಳಕಳಿಯಿಲ್ಲದೆ ಬೃಹತ್ ರಸ್ತೆ, ಹೆದ್ದಾರಿ ಮತ್ತು ಇತರ ಸಿವಿಲ್ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಿದ್ದರು.
ದಮನ್ ಮತ್ತು ದಿಯುವಿನ ಪಾಠಗಳು ಅಗೆದಷ್ಟೂ ಆಳವಾಗಿವೆ. ಪಟೇಲ್ ರನ್ನು ಆಡಳಿತಗಾರರಾಗಿ ಅಲ್ಲಿಗೆ ಏಕೆ ಕಳಹಿಸಲಾಗಿತ್ತು ಎಂಬ ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ. ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಪಟೇಲ್ ನಿಕಟತೆಯನ್ನು ಕೆಲವು ಮಾಧ್ಯಮ ವರದಿಗಳು ಬೆಟ್ಟು ಮಾಡಿದ್ದರೆ ಇತರರು ಅದನ್ನು ಒಪ್ಪುತ್ತಿಲ್ಲ. ರಾಜ್ಯ ಸಚಿವ ಸ್ಥಾನವನ್ನು ನಿರ್ವಹಿಸಲಾಗದ ಈ ವ್ಯಕ್ತಿ ಇತರರಿಂದ ಕಡೆಗಣಿಸಲ್ಪಟ್ಟಿದ್ದರು ಎಂದು ಗುಜರಾತಿನ ಸಮಾಜಶಾಸ್ತ್ರಜ್ಞರೋರ್ವರು ಹೇಳಿದರು.
ದಮನ್ ಮತ್ತು ದಿಯು ತಲುಪಿದ ಬಳಿಕ ಪಟೇಲ್ ಸ್ಥಳೀಯ ಸಂಸದರು ಮತ್ತು ಇತರ ಚುನಾಯಿತ ಸಂಸ್ಥೆಗಳ ಅಧಿಕಾರವನ್ನು ಕಿತ್ತುಕೊಂಡಿದ್ದರು. ಆಡಳಿತದಲ್ಲಿ ತನ್ನ ಸಲಹೆಗಾರರನ್ನು ತೂರಿಸಿದ್ದರು ಮತ್ತು ಅಧಿಕಾರಶಾಹಿಯು ಈ ಪಟೇಲ್ ಆಪ್ತರಿಂದ ಆದೇಶಗಳನ್ನು ಪಡೆಯಬೇಕಿತ್ತು ಎಂದು ಸ್ಥಳಿಯ ಉದ್ಯಮಿಯೋರ್ವರು ತಿಳಿಸಿದರು.
ಕೇಂದ್ರಾಡಳಿತ ಪ್ರದೇಶದ ಅಧಿಕಾರಿಗಳೊಂದಿಗೆ ಕಾರ್ಯ ನಿರ್ವಹಿಸದೆ ಈ ಸಲಹೆಗಾರರ ಮೂಲಕ ಏಕೆ ಕೆಲಸ ಮಾಡುತ್ತೀರಿ ಎಂಬ ಸುದ್ದಿಸಂಸ್ಥೆಯ ಪ್ರಶ್ನೆಗೆ ಪಟೇಲ್ ಉತ್ತರಿಸಿರಲಿಲ್ಲ. ಅಲ್ಲಿ ಸಾಲುಸಾಲಾಗಿ ಹೋಟೆಲ್ ಗಳು, ಸಿವಿಲ್ ನಿರ್ಮಾಣಗಳು ಇತ್ಯಾದಿಗಳಿಗಾಗಿ ಟೆಂಡರ್ಗಳನ್ನು ನೀಡಲಾಗಿತ್ತು. ಇವುಗಳ ಬಗ್ಗೆ ಸ್ಥಳೀಯರಿಂದ ಆರೋಪಗಳು ಕೇಳಿಬಂದಿದ್ದವು.
ಟೆಂಡರ್ ನೀಡಿಕೆಗಳಲ್ಲಿ ಸ್ವಜನ ಪಕ್ಷಪಾತ ನಡೆದಿತ್ತು ಮತ್ತು ಹೆಚ್ಚಿನ ಟೆಂಡರ್ಗಳು ಗುಜರಾತಿನ ಕಂಪನಿಗಳ ಪಾಲಾಗಿತ್ತು. ಪಟೇಲ್ ಗುಜರಾತಿನವರು ಎನ್ನುವುದನ್ನು ಇಲ್ಲಿ ಗಮನಿಸಬೇಕು. ಗೋಧ್ರಾದ ಕಮಲೇಶ್ ಕುಮಾರ್ ನವೀನಚಂದ್ರ ಶಾ ಮುಖ್ಯ ಪಾಲುದಾರರಾಗಿರುವ ಆರ್ಕೆಸಿ ಇನ್ಫ್ರಾಬಿಲ್ಟ್ ಅಧಿಕ ಸಂಖ್ಯೆಯ ಟೆಂಡರ್ಗಳನ್ನು ಪಡೆದುಕೊಂಡಿತ್ತು. ಅಂದಾಜು ಟೆಂಡರ್ ಮೌಲ್ಯದ ಶೇ.41.87ಮತ್ತು ಶೇ.33ರಷ್ಟು ಅಧಿಕ ಬಿಡ್ ಗಳನ್ನು ನಮೂದಿಸಿದ್ದರೂ ಟೆಂಡರ್ಗಳು ಈ ಕಂಪನಿಗೇ ಸಿಕ್ಕಿದ್ದವು.
ಸಲ್ಲಿಕೆಯಾದ ಬಿಡ್ ಅಂದಾಜು ಮೌಲ್ಯಕ್ಕಿಂತ ಶೇ.30ರಷ್ಟು ಹೆಚ್ಚಿದ್ದರೆ ಮರು ಟೆಂಡರ್ ಕರೆಯಬೇಕಾಗುತ್ತದೆ ಎಂದು ಹಿರಿಯ ಅಧಿಕರಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು. ಆದರೆ ಪಟೇಲ್ ಈ ಎಲ್ಲ ನಿಯಮಗಳನ್ನು ಗಾಳಿಗೆ ತೂರಿದ್ದರು. 2007ರಲ್ಲಿ ಕೇವಲ ಒಂದು ಕೋಟಿ ರೂ.ಇದ್ದ ಪಟೇಲರ ಆಸ್ತಿಯ ಮೌಲ್ಯ 2012ರಲ್ಲಿ ಅವರು ಗುಜರಾತ್ ಸಚಿವರಾಗಿದ್ದಾಗ ಒಂಭತ್ತು ಕೋ.ರೂ.ಗೆ ಏರಿತ್ತು ಎನ್ನುವುದನ್ನು ಇಲ್ಲಿ ಉಲ್ಲೇಖಿಸಬಹುದು. ಈಗ ಲಕ್ಷದ್ವೀಪದಲ್ಲಿಯೂ ಪಟೇಲ್ ತನ್ನ ಹಳೆಯ ದಾಖಲೆಗಳನ್ನು ಮುಂದುವರಿಸಿದ್ದಾರೆ.
ದ್ವೀಪದ ಪರಿಸರ, ಪ್ರಜಾಸತ್ತಾತ್ಮಕ ಮತ್ತು ಸಾಮಾಜಿಕ ಚೌಕಟ್ಟುಗಳ ಮೇಲೆ ಪಟೇಲರ ದಾಳಿ ಸಾರ್ವಜನಿಕರಲ್ಲಿ ಆಕ್ರೋಶವನ್ನು ಸೃಷ್ಟಿಸಿದೆ. ಇದ್ಯಾವುದನ್ನೂ ಲೆಕ್ಕಿಸದ ಆಡಳಿತವು ಅಮುಲ್ ಹಾಲಿನ ವಿತರಣೆಯ, ಕೇರಳ ಮತ್ತು ಮಂಗಳೂರಿನಿಂದ ನೌಕಾಸಾರಿಗೆ ವ್ಯವಸ್ಥೆಯ ಉಸ್ತುವಾರಿಯ ಗುತ್ತಿಗೆಗಳನ್ನು ಕಂಪನಿಗಳಿಗೆ ನೀಡುತ್ತಿದೆ, ಹೊಸ ಹೊಸ ಟೆಂಡರ್ಗಳನ್ನು ಕರೆಯುತ್ತಲೇ ಇದೆ.
ದಮನ್ ಮತ್ತು ದಿಯು ಹಾಗೂ ದಾದ್ರಾ ಮತ್ತು ನಗರ ಹವೇಲಿಗಳಿಂದ ತನ್ನ ಕೆಲವು ಅಧಿಕಾರಿಗಳನ್ನು ಪಟೇಲ್ ಲಕ್ಷದ್ವೀಪಕ್ಕೆ ಕರೆಸಿಕೊಳ್ಳುತ್ತಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಗುಜರಾತಿನ ಕಂಪನಿಗಳು ಪಟೇಲ್ ರನ್ನು ಹಿಂಬಾಲಿಸಿಕೊಂಡು ಲಕ್ಷದ್ವೀಪಕ್ಕೂ ಬರುತ್ತವೆಯೇ ಎನ್ನುವುದನ್ನು ಕಾದು ನೋಡಬೇಕಿದೆ.
ಲಕ್ಷದ್ವೀಪವನ್ನು ಮಾಲ್ದೀವ್ಸ್ ನ ಮಾದರಿಯಲ್ಲಿ ಪ್ರವಾಸಿ ತಾಣವನ್ನಾಗಿ ರೂಪಿಸಲಾಗುವುದು ಎಂದು ಪಟೇಲ್ ಹೇಳಿಕೊಳ್ಳುತ್ತಿದ್ದಾರೆ. ದ್ವೀಪ ಪರಿಸರ ವ್ಯವಸ್ಥೆಗಳು ಮುಖ್ಯ ಭೂಮಿಗೆ ಹೋಲಿಸಿದರೆ ತುಂಬ ಸೂಕ್ಷ್ಮವಾಗಿರುತ್ತವೆ. ಮಾಲ್ದೀವ್ಸ್ ಗೆ ಹೋಲಿಸಿದರೆ ಲಕ್ಷದ್ವೀಪವು ಹೆಚ್ಚು ಸೂಕ್ಷ್ಮವಾಗಿದೆ. ಮಾಲ್ದೀವ್ಸ್ ಒಂದು ಸಾವಿರಕ್ಕೂ ಅಧಿಕ ದ್ವೀಪಗಳನ್ನು ಹೊಂದಿದ್ದು, ಅಲ್ಲಿ ಪ್ರವಾಸೋದ್ಯಮಕ್ಕೆ ಪೂರಕ ಅಗತ್ಯಗಳು ಮತ್ತು ಸೌಲಭ್ಯಗಳಿವೆ. ಲಕ್ಷದ್ವೀಪವು ಇನ್ನಷ್ಟೇ ಪ್ರವಾಸೋದ್ಯಮದ ಬಿರುಸನ್ನು ಕಾಣಬೇಕಿದೆ.
ಪ್ರವಾಸೋದ್ಯಮ ಮಾತ್ರವಲ್ಲ, ಪಟೇಲ್ ಹಲವಾರು ನಿರ್ಮಾಣ ಯೋಜನೆಗಳನ್ನೂ ಪ್ರಸ್ತಾವಿಸಿದ್ದಾರೆ. ಲಕ್ಷದ್ವೀಪವು ತನ್ನ ಅನನ್ಯತೆಗೆ, ತನ್ನ ಸಂಸ್ಕೃತಿಗೆ ಮತ್ತು ತನ್ನ ಅಸ್ತಿತ್ವಕ್ಕೆ ಹಿಂದೆಂದಿಗಿಂತಲೂ ಹೆಚ್ಚಿನ ಬೆದರಿಕೆಯನ್ನು ಎದುರಿಸುತ್ತಿದೆ.