ಬ್ರಾಹ್ಮಣ್ಯದ ಕುರಿತ ಹೇಳಿಕೆಗಾಗಿ ವಿಚಾರಣೆಗೆ ಹಾಜರು: ಪೊಲೀಸರಿಗೆ ಚಿಂತಕರನ್ನು ಪರಿಚಯಿಸಿದ ನಟ ಚೇತನ್
''ನನ್ನ ಹೇಳಿಕೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ''

Photo: Facebook.com/chetanahimsa
ಬೆಂಗಳೂರು, ಜೂ.16: ಬ್ರಾಹ್ಮಣ್ಯದ ಕುರಿತ ಹೇಳಿಕೆ ಸಂಬಂಧ ಪೊಲೀಸರ ವಿಚಾರಣೆ ಎದುರಿಸಿದ ನಟ, ಸಾಮಾಜಿಕ ಕಾರ್ಯಕರ್ತ ಚೇತನ್, ತನಿಖಾಧಿಕಾರಿಗಳಿಗೆ ಬಹುಜನ ಚಿಂತಕರನ್ನು ಪರಿಚಯಿಸಿದ ಪ್ರಸಂಗ ಜರುಗಿತು ಎಂದು ಮೂಲಗಳು ತಿಳಿಸಿವೆ.
ಬ್ರಾಹ್ಮಣ್ಯದ ಕುರಿತು ಹೇಳಿಕೆ ಸಂಬಂಧ ಬಸವನಗುಡಿ ಪೊಲೀಸ್ ಠಾಣೆಗೆ ಬುಧವಾರ ವಿಚಾರಣೆಗೆ ಹಾಜರಾದ ಚೇತನ್ ಅವರನ್ನು ತನಿಖಾಧಿಕಾರಿಗಳು ಸತತ ನಾಲ್ಕು ಗಂಟೆಗಳ ಕಾಲ ವಿಚಾರಣೆ ನಡೆಸಿ, ಕೆಲ ಪ್ರಶ್ನೆಗಳ ಉತ್ತರವನ್ನು ಲಿಖಿತ ರೂಪದಲ್ಲಿ ದಾಖಲಿಸಿದರು.
ವಿಚಾರಣೆಯ ಪ್ರತಿವೊಂದು ಪ್ರಶ್ನೆಗೂ ಆಧಾರದ ಪ್ರತಿಯಾಗಿ ಸಾಮಾಜಿಕ ಹರಿಕಾರಕ ಬಸವಣ್ಣ, ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್, ಪೆರಿಯಾರ್ ರಾಮಸ್ವಾಮಿ ಸೇರಿದಂತೆ ಹಲವು ಸಮಾಜ ಸುಧಾರಕರ ಹೇಳಿಕೆಗಳನ್ನೇ ಚೇತನ್ ಉಲ್ಲೇಖಿಸಿದರು ಎಂದು ತಿಳಿದುಬಂದಿದೆ.
''ಬ್ರಾಹ್ಮಣ್ಯ ಎನ್ನುವುದು ಇಂದು ಹುಟ್ಟುಹಾಕಿದ್ದಲ್ಲ. ಹಲವು ಶತಮಾನಗಳಿಂದ ಜಾರಿಯಲ್ಲಿದೆ. ಇದನ್ನು, ಎಲ್ಲರೂ ಜೊತೆಗೂಡಿ ತೊಲಗಿಸಬೇಕು. ಇದಕ್ಕಾಗಿ ಸಮಾಜದಲ್ಲಿ ಅರಿವು ಮೂಡಿಸುವ ಕಾಯಕದಲ್ಲಿ ನಾನು ಇದ್ದೇನೆ ಹೊರತು, ಇದಕ್ಕೆ ವೈಯಕ್ತಿಕ ಲೇಪ ಬೇಡ. ಅಲ್ಲದೆ, ಈ ಹಿಂದೆಯೇ ಸಮಾಜ ಸುಧಾರಕರು, ಚಿಂತಕರು, ಬಹುಜನ ಕ್ರಾಂತಿಕಾರಿಗಳು ಇದರ ವಿರುದ್ಧ ಹೋರಾಟವನ್ನು ಕೈಗೊಂಡಿರುವ ಉದಾಹರಣೆಗಳು ಜೀವಂತವಾಗಿದೆ'' ಎಂದು ಚೇತನ್ ಉತ್ತರಿಸಿದರು.
ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿರುವವರು ಸಂವಿಧಾನ ವಿರೋಧಿಗಳು. ಮಾನವೀಯತೆಯ ವಿರೋಧಿಗಳೂ ಹೌದು ಎಂದಿರುವ ಅವರು, ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಮನುಷ್ಯರ ನಡುವೆ ಜೀವಂತವಾಗಿರುವ ಭೇದ ಭಾವನೆಯನ್ನು ಪ್ರಶ್ನಿಸುತ್ತೇನೆ. ಇದನ್ನು ನಿಲ್ಲಿಸಲು ಸಾಧ್ಯವೇ ಇಲ್ಲ ಎಂದು ತನಿಖಾಧಿಕಾರಿಗಳಿಗೆ ಅವರು ತಿಳಿಸಿದ್ದಾರೆ.
ಮತ್ತೆ ವಿಚಾರಣೆ: ವಿಚಾರಣೆ ಬಳಿಕ "ವಾರ್ತಾಭಾರತಿ"ಗೆ ಪ್ರತಿಕ್ರಿಯಿಸಿದ ಅವರು, ಮತ್ತೆ ವಿಚಾರಣೆ ಕರೆಯುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ, ಯಾವ ದಿನದಂದು ಎಂದು ಮಾಹಿತಿ ತಿಳಿಸಿಲ್ಲ. ಅವರ ಕೆಲಸ ಮಾಡಲಿ, ನಾನು ಸಮಾಜ ಕಟ್ಟುವ ಕೆಲಸ ಮುಂದುವರಿಸುತ್ತೇನೆ ಎಂದು ತಿಳಿಸಿದರು.
ಠಾಣೆಯಲ್ಲಿ ಸತತ 4 ಗಂಟೆಗಳ ಕಾಲ ವಿಚಾರಣೆ ನಡೆಸಿದರು. ಆಗ ಚಿಂತಕರ ಮಾತುಗಳನ್ನೆ ಹೇಳಿದ್ದೇನೆ. ಎಲ್ಲರೂ ಚಿಂತಕರು, ಸಮಾಜ ಸುಧಾರಕರು ಹೇಳಿರುವ ಮಾತುಗಳನ್ನು ಒಮ್ಮೆ ಓದಿ, ತಿಳಿದುಕೊಳ್ಳುವಂತೆ ಆಗಲಿ ಎಂದು ಚೇತನ್ ನುಡಿದರು.
ಏನಿದು ಪ್ರಕರಣ?
ಬ್ರಾಹ್ಮಣ ಹಾಗೂ ಬ್ರಾಹ್ಮಣ್ಯದ ವಿರುದ್ಧ ಚೇತನ್ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ವಿಪ್ರ ಯುವ ವೇದಿಕೆ ಅಧ್ಯಕ್ಷ ಪವನ್ ಕುಮಾರ್ ಶರ್ಮಾ ಎಂಬವರು ನೀಡಿದ್ದ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು, ವಿಚಾರಣೆಗೆ ಬರುವಂತೆ ಚೇತನ್ ಅವರಿಗೆ ನೋಟಿಸ್ ನೀಡಿದ್ದರು.
ಏನಿದು ಪೋಸ್ಟ್?
ಬ್ರಾಹ್ಮಣ್ಯ ಜನನದ ಆಧಾರದ ಮೇಲೆ ಮನುಷ್ಯರನ್ನು ಶ್ರೇಣೀಕರಿಸಿದೆ. ದಕ್ಷಿಣ ಏಷ್ಯಾದ ಎಲ್ಲಾ ಜಾತಿ ಮತ್ತು ಅನೇಕ ಧರ್ಮಗಳ ನಡುವೆ ವ್ಯವಸ್ಥಿತವಾಗಿ ಮತ್ತು ಸೈದ್ಧಾಂತಿಕ ಮಟ್ಟದಲ್ಲಿ ಬ್ರಾಹ್ಮಣ್ಯ ಇನ್ನೂ ಅಸ್ತಿತ್ವದಲ್ಲಿದೆ. ಅಂತಹ ರಚನಾತ್ಮಕ ಅಸಮಾನತೆ ನಿವಾರಣೆಗೆ ಬುದ್ಧ, ಬಸವ, ಶರಣರು, ಅಂಬೇಡ್ಕರ್, ಪೆರಿಯಾರ್, ಬಹುಜನ ಹೋರಾಟಗಾರರ ತರ್ಕಬದ್ಧ ಸಮತಾವಾದವೇ ಪರಿಹಾರ ಎಂದು ನಟ ಚೇತನ್ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು.
ಹಿಂದೆ ಸರಿಯುವ ಮಾತೇ ಇಲ್ಲ: ಚೇತನ್
ನಾನು ಯಾವುದೇ ಜಾತಿಯನ್ನು ಗುರಿಯಾಗಿಸಿಕೊಂಡು ಹೋರಾಟ ನಡೆಸುತ್ತಿಲ್ಲ. ಬದಲಾಗಿ ಭೇದ- ಭಾವ, ಅಸಮಾನತೆಗಳ ವಿರುದ್ಧವೇ ಹೋರಾಟ ನಡೆಸುತ್ತಿದ್ದು, ನನ್ನ ಹೇಳಿಕೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಚೇತನ್ ಹೇಳಿದರು.
ಬಸವನಗುಡಿ ಪೊಲೀಸ್ ಠಾಣೆಗೆ ಬುಧವಾರ ವಿಚಾರಣೆಗೆ ಹಾಜರಾದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಬ್ರಾಹ್ಮಣ ಸಮುದಾಯವನ್ನು ಎಲ್ಲಿಯೂ ನಿಂದನೆ ಮಾಡಿಲ್ಲ. ಎಲ್ಲ ಧರ್ಮ, ಜಾತಿಗಳಲ್ಲಿಯೂ ಬ್ರಾಹ್ಮಣ್ಯ ಇದೆ. ಅದನ್ನು ಶಾಶ್ವತವಾಗಿ ದೂರಗೊಳಿಸುವ ನಿಟ್ಟಿನಲ್ಲಿ ಹೇಳಿಕೆ ನೀಡಿದ್ದೇನೆ ಎಂದರು.
ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇದೆ. ನಾನು ಜಾತಿಯ ವಿರುದ್ಧ ಹೋರಾಟ ನಡೆಸುತ್ತಿಲ್ಲ. ಹುಟ್ಟಿದ ತಕ್ಷಣವೇ ಶ್ರೇಷ್ಠ ಹಾಗೂ ಕನಿಷ್ಠ ಎನ್ನುವ ಮನಸ್ಥಿತಿ ಹಾಗೂ ವ್ಯವಸ್ಥೆಯ ವಿರುದ್ಧ ಹೋರಾಟ ಮುಂದುವರಿಯಲಿದೆ ಎಂದು ಅವರು ಹೇಳಿದರು.







