ಮಾಬುಕಳ ಸೇತುವೆಯ ಹೊಳೆ ಬದಿ ಮೃತದೇಹ ಪತ್ತೆ
ಕೋಟ ಜೂ 16: ರಾಷ್ಟ್ರೀಯ ಹೆದ್ದಾರಿ 66ರ ಮಾಬುಕಳ ಸೇತುವೆಯ ಬಳಿಯ ಸೀತಾನದಿ ಬದಿಯಲ್ಲಿ ಬುಧವಾರ ಬೆಳಗ್ಗೆ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ. ಮೃತರನ್ನು ಬ್ರಹ್ಮಾವರ ಚಾಂತಾರು ಗ್ರಾಮದ ನಾರಾಯಣ ನಾಯಕ್ (45) ಎಂದು ಗುರುತಿಸಲಾಗಿದೆ.
ಇವರು ಬ್ರಹ್ಮಾವರದಲ್ಲಿ ವಿಲ್ಸಿಲ್ಮಾ ಕಾಂಪೌಂಡ್‌ನ ಬಾಡಿಗೆ ಮನೆಯಲ್ಲಿ ತನ್ನ ಹೆಂಡತಿ, ಮಕ್ಕಳೊಂದಿಗೆ ವಾಸವಾಗಿದ್ದರು. ನಾರಾಯಣ ನಾಯಕ್ ಮಾನಸಿಕ ರೋಗಿಯಾಗಿದ್ದು, ಇವರಿಗೆ ಮಣಿಪಾಲದ ಕೆಎಂಸಿಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಅಲ್ಲದೇ ಮದ್ಯಪಾನದ ಅಭ್ಯಾಸ ಹೊಂದಿದ್ದ ನಾರಾಯಣ ನಾಯಕ್, ಜೂ.14ರ ಅಪರಾಹ್ನ 3:00 ಗಂಟೆಗೆ ಮನೆಯಿಂದ ನಾಪತ್ತೆಯಾಗಿದ್ದು, ಈ ಬಗ್ಗೆ ಪತ್ನಿ ಪುಷ್ಪಾಲತಾ ನಾಯಕ್ ಜೂ.15ರಂದು ಬ್ರಹ್ಮಾವರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಆದರೆ ಬುಧವಾರ ಬೆಳಗ್ಗೆ 9:00 ಗಂಟೆ ಸುಮಾರಿಗೆ ಕುಮ್ರಗೋಡು ಗ್ರಾಮದ ಮಾಬುಕಳ ಸೇತುವೆಯ ಬಳಿ, ರಾಹೆ 66ರ ಎಡಬದಿಯ ಸೀತಾನದಿಯಲ್ಲಿ ನಾರಾಯಣ ನಾಯಕ್‌ರ ಮೃತದೇಹ ಪತ್ತೆಯಾಗಿದೆ. ತನಗಿದ್ದ ಮಾನಸಿಕ ಕಾಯಿಲೆ ಹಾಗೂ ಕುಡಿತ ಚಟದಿಂದ ಮನನೊಂದು ಮನೆಬಿಟ್ಟು ಹೋಗಿ ಮಾಬುಕಳ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





