2 ತಿಂಗಳ ಬಳಿಕ ಸಾರ್ವಜನಿಕ ವೀಕ್ಷಣೆಗೆ ತೆರೆದ ತಾಜ್ ಮಹಲ್

ಹೊಸದಿಲ್ಲಿ, ಜೂ. 15: ಕೊರೋನ ಸಾಂಕ್ರಾಮಿಕ ರೋಗದ ಎರಡನೇ ಅಲೆು ಹಿನ್ನೆಲೆಯಲ್ಲಿ ಎರಡು ತಿಂಗಳುಗಳ ಕಾಲ ಮುಚ್ಚಲಾಗಿದ್ದ ತಾಜ್ ಮಹಲ್ ಬುಧವಾರ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿದೆ. ಕೊರೋನ ಸಾಂಕ್ರಾಮಿಕ ರೋಗದ ಮೊದಲ ಅಲೆಯ ಹಿನ್ನೆಲೆಯಲ್ಲಿ ತಾಜ್ ಮಹಲ್ ಅನ್ನು ಕಳೆದ ವರ್ಷ ಮಾರ್ಚ್ 17ರಂದು ಮೊದಲ ಬಾರಿಗೆ ಮುಚ್ಚಲಾಗಿತ್ತು. ಅನಂತರ ಹಲವು ನಿರ್ಬಂಧಗಳೊಂದಿಗೆ 2020 ಸೆಪ್ಟಂಬರ್ 21ರಂದು ಮರು ತೆರೆಯಲಾಗಿತ್ತು.
ದೇಶ ಕೊರೋನ ಸಾಂಕ್ರಾಮಿಕ ರೋಗದ ಎರಡನೇ ಅಲೆಗೆ ತುತ್ತಾದ ಸಂದರ್ಭ ತಾಜ್ ಮಹಲ್ ಅನ್ನು ಈ ವರ್ಷ ಎಪ್ರಿಲ್ 16ರಂದು ಮತ್ತೆ ಮುಚ್ಚಲಾಗಿತ್ತು. ಈ ಬಾರಿ ಎಲ್ಲಾ ಕೋವಿಡ್ ಶಿಷ್ಟಾಚಾರಗಳನ್ನು ಅನುಸರಿಸಿ ಒಂದು ಬಾರಿಗೆ 650 ಜನರಿಗೆ ಮಾತ್ರ ತಾಜ್ಮಹಲ್ ವೀಕ್ಷಿಸಲು ಅವಕಾಶ ನೀಡಲಾಗುವುದು ಎಂದು ಆಗ್ರಾ ಜಿಲ್ಲಾ ದಂಡಾಧಿಕಾರಿ ಪ್ರಭು ಎನ್. ಸಿಂಗ್ ಮಂಗಳವಾರ ತಿಳಿಸಿದ್ದಾರೆ. ತಾಜ್ಮಹಲ್ ಅನ್ನು ದಿನಕ್ಕೆ ಮೂರು ಬಾರಿ ಸ್ಯಾನಿಟೈಸ್ಗೊಳಿಸಲಾಗುವುದು ಎಂದು ಆಗ್ರಾ ಸರ್ಕಲ್ ನ ಎಎಸ್ಐಯ ಪುರಾತತ್ತ್ವಶಾಸ್ತ್ರಜ್ಞ ವಸಂತ್ ಕುಮಾರ್ ಸ್ವರ್ಣೇಕರ್ ತಿಳಿಸಿದ್ದಾರೆ.
ಕೇವಲ ಆನ್ಲೈನ್ ಮುಂಗಡ ಕಾಯ್ದಿರಿಸುವಿಕೆಗೆ ಮಾತ್ರ ಅವಕಾಶ ನೀಡಲಾಗಿದೆ. ತಾಜ್ಮಹಲ್ ಆವರಣದಲ್ಲಿ ಯಾವುದೇ ಟಿಕೆಟ್ ಕೌಂಟರ್ ತೆರೆಯುವುದಿಲ್ಲ ಎಂದು ಸ್ವರ್ಣೇಕರ್ ತಿಳಿಸಿದ್ದಾರೆ. ಈ ನಡುವೆ ಫೋನ್ ಮೂಲಕ ಕೇವಲ ಐದು ಟಿಕೆಟ್ಗಳನ್ನು ಮಾತ್ರ ಮುಂಗಡ ಕಾಯ್ದಿರಿಸಬಹುದು ಎಂದು ಆಗ್ರಾ ಜಿಲ್ಲಾ ದಂಡಾಧಿಕಾರಿ ಪ್ರಭು ಎನ್. ಸಿಂಗ್ ಹೇಳಿದ್ದಾರೆ.