ಪಿಎನ್ಬಿ ವಂಚನೆ ಹಗರಣ: ಸಿಬಿಐಯಿಂದ ಪೂರಕ ಆರೋಪ ಪಟ್ಟಿ ಸಲ್ಲಿಕೆ
ಹೊಸದಿಲ್ಲಿ, ಜೂ. 15: ಪಂಜಾಬ್ ನ್ಯಾಷನಲ್ ಬ್ಯಾಂಕ್ನಲ್ಲಿ ನಡೆದಿದೆ ಎನ್ನಲಾದ 7,080 ಕೋಟಿ ರೂಪಾಯಿಗೂ ಅಧಿಕ ಮೊತ್ತದ ವಂಚನೆ ಹಗರಣಕ್ಕೆ ಸಂಬಂಧಿಸಿ ಗೀತಾಂಜಲಿ ಕಂಪೆನಿಗಳ ಸಮೂಹದ ಮಾಜಿ ಅಂತಾರಾಷ್ಟ್ರೀಯ ಮುಖ್ಯಸ್ಥ ಸುನೀಲ್ ವರ್ಮಾ ಅವರ ವಿರುದ್ಧ ಸಿಬಿಐ ಬುಧವಾರ ಆರೋಪ ಪಟ್ಟಿ ಸಲ್ಲಿಸಿದೆ. ಸಿಬಿಐ ಸಲ್ಲಿಸಿದ ಪೂರಕ ಆರೋಪ ಪಟ್ಟಿಯಲ್ಲಿ ಪಂಜಾಬ್ ನ್ಯಾಶನಲ್ ಬ್ಯಾಂಕ್ನ ಇಬ್ಬರು ಅಧಿಕಾರಿಗಳಾದ ಸಾಗರ್ ಸಾವಂತ್, ಸಂಜಯ್ ಪ್ರಸಾದ್ ಹಾಗೂ ಕಂಪೆನಿಗಳ ಸಮೂಹದ ಅಡಿಯಲ್ಲಿ ಬರುವ ಗಿಲಿ ಹಾಗೂ ನಕ್ಷತ್ರ ಬ್ರಾಂಡ್ಗಳ ನಿರ್ದೇಶಕ ಧನೇಶ್ ಸೇಠ್ ಅವರನ್ನು ಕೂಡ ಆರೋಪಿಗಳೆಂದು ಹೆಸರಿಸಲಾಗಿದೆ.
ನೆರೆಯ ಆ್ಯಂಟಿಗುವಾ ಹಾಗೂ ಬರ್ಬುಡಾದಿಂದ ನಿಗೂಢವಾಗಿ ನಾಪತ್ತೆಯಾದ ಬಳಿಕ ‘ಅಕ್ರಮ ಪ್ರವೇಶ’ದ ಆರೋಪದಲ್ಲಿ ಡೊಮಿನಿಕಾದಿಂದ ಮೇ 24ರಂದು ಬಂಧಿತನಾಗಿದ್ದ ಮೆಹುಲ್ ಚೋಕ್ಸಿ ವಿರುದ್ಧ ಡೊಮಿನಿಕಾದ ನ್ಯಾಯಾಲಯದಲ್ಲಿ ಕಾನೂನು ಕಲಾಪಗಳು ಆರಂಭವಾಗಿದೆ. ಇದೇ ಸಂದರ್ಭ ಚೋಕ್ಸಿ ವಿರುದ್ಧ ಪೂರಕ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಚೋಕ್ಸಿ ವಿರುದ್ಧ ಮೊದಲ ಆರೋಪ ಪಟ್ಟಿಯನ್ನು ಮೂರು ವರ್ಷಗಳ ಹಿಂದೆ ಸಲ್ಲಿಸಲಾಗಿತ್ತು. ಪಂಜಾಬ್ ನ್ಯಾಷನಲ್ ಬ್ಯಾಂಕ್ನಲ್ಲಿ ನಡೆದಿದ ಎನ್ನಲಾದ ವಂಚನೆ ಹಗರಣ ಬೆಳಕಿಗೆ ಬರುವ ವಾರಗಳ ಮುನ್ನ ಚೋಕ್ಸಿ ಭಾರತದಿಂದ ಪರಾರಿಯಾಗಿದ್ದ. ಅನಂತರ 2018ರಿಂದ ಆತ ಆಂಟಿಗು ವ ಹಾಗೂ ಬರ್ಬುಡಾದ ನಿವಾಸಿಯಾಗಿದ್ದ.







