ಕೆಲ ಸೆಲೆಬ್ರಿಟಿಗಳು ತಮ್ಮನ್ನು ಮಹಾತ್ಮರಂತೆ ಬಿಂಬಿಸಲೆತ್ನಿಸಿದ್ದಾರೆ: ಸೋನುಸೂದ್, ಝಿಶಾನ್ ಕುರಿತು ಬಾಂಬೆ ಹೈಕೋರ್ಟ್
ವಿಸ್ತೃತ ತನಿಖೆ ನಡೆಸುವಂತೆ ಆದೇಶಿಸಿದ ನ್ಯಾಯಾಲಯ

ಮುಂಬೈ: ಸಾಮಾಜಿಕ ಜಾಲತಾಣಗಳಲ್ಲಿ ಜನರು ಸಲ್ಲಿಸಿದ ಮನವಿಗಳಿಗೆ ಸ್ಪಂದಿಸಿ ಶಾಸಕ ಝಿಶಾನ್ ಸಿದ್ದೀಖ್ ಹಾಗೂ ಬಾಲಿವುಡ್ ನಟ ಸೋನು ಸೂದ್ ಕೋವಿಡ್ ಚಿಕಿತ್ಸೆಗೆ ನೀಡಲಾಗುವ ಔಷಧಿಗಳನ್ನು ಪೂರೈಸಿರುವ ಕುರಿತಂತೆ ವಿಸ್ತೃತ ತನಿಖೆ ನಡೆಸುವಂತೆ ಬಾಂಬೆ ಹೈಕೋರ್ಟ್ ಬುಧವಾರ ಮಹಾರಾಷ್ಟ್ರ ಸರಕಾರಕ್ಕೆ ಆದೇಶಿಸಿದೆ.
ಇಂತಹ ಔಷಧಿಗಳನ್ನು ಕೇಂದ್ರ ಸರಕಾರ ರಾಜ್ಯಗಳ ಅಗತ್ಯತೆಗಳಿಗೆ ತಕ್ಕಂತೆ ಪೂರೈಸುತ್ತಿದ್ದುದರಿಂದ ಹಾಗೂ "ದೇಶದಲ್ಲಿ ಈ ಔಷಧಿಗಳು ವಿರಳ ಪ್ರಮಾಣದಲ್ಲಿ ಲಭ್ಯವಿರುವ ಸಂದರ್ಭ ಈ ಇಬ್ಬರು ಔಷಧಿಗಳನ್ನು ಪೂರೈಸಿರುವುದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ.
"ಈ ಜನರು (ಸೆಲೆಬ್ರಿಟಿಗಳು ಹಾಗೂ ರಾಜಕಾರಣಿಗಳು) ಪೂರೈಕೆಯಾಗುವ ಔಷಧಿಗಳು ನಕಲಿಯೇ ಅಥವಾ ಅಕ್ರಮವಾಗಿ ಪೂರೈಕೆಯಾಗುತ್ತಿವೆಯೇ ಎಂಬುದನ್ನು ಪರಾಮರ್ಶಿಸದೆ ತಮ್ಮನ್ನು ಒಂದು ರೀತಿಯ ಮಹಾತ್ಮರಂತೆ ಬಿಂಬಿಸಲು ಯತ್ನಿಸುತ್ತಿದ್ದಾರೆ" ಎಂದು ಜಸ್ಟಿಸ್ ಸುನಿಲ್ ಪಿ ದೇಶಮುಖ್ ಹಾಗೂ ಜಸ್ಟಿಸ್ ಗಿರೀಶ್ ಎಸ್ ಕುಲಕರ್ಣಿ ಅವರ ವಿಭಾಗೀಯ ಪೀಠ ಹೇಳಿದೆ.
ಮಹಾರಾಷ್ಟ್ರದಲ್ಲಿ ಕೋವಿಡ್ ನಿರ್ವಹಣೆ ಸರಿಯಾಗಿ ನಡೆದಿಲ್ಲ ಎಂದು ಆರೋಪಿಸಿ ಸಲ್ಲಿಸಲಾಗಿರುವ ಹಲವು ಪಿಐಎಲ್‍ಗಳ ವಿಚಾರಣೆ ಸಂದರ್ಭ ನ್ಯಾಯಾಲಯ ಮೇಲಿನಂತೆ ಹೇಳಿದೆ.
"ಸಾಮಾಜಿಕ ಜಾಲತಾಣದಲ್ಲಿ ನಾನು ನಿಮಗೆ ಸಹಾಯ ಮಾಡುತ್ತೇನೆ ಎಂದು ಯಾರಿಗೂ ಹೇಳುವುದು ಸುಲಭ. ಆದರೆ ಜನರು ಏನಂದುಕೊಳ್ಳುತ್ತಾರೆ? ಅಗತ್ಯ ಔಷಧಿಗಳ ಪೂರೈಕೆಗೆ ಸರಕಾರ ಸಕಲ ರೀತಿಯಲ್ಲಿ ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ ಪರ್ಯಾಯವಾಗಿ ಈ ರೀತಿ ನಡೆಸುವುದು ಸರಿಯೇ? ಈ ಇಬ್ಬರ ಪಾತ್ರವನ್ನು ಪರಿಶೀಲಿಸುವುದನ್ನು ನಿಮ್ಮ ಆತ್ಮಸಾಕ್ಷಿಗೆ ಬಿಡುತ್ತೇವೆ" ಎಂದು ನ್ಯಾಯಾಲಯ ಅಡ್ವಕೇಟ್ ಜನರಲ್ ಅಶುತೋಷ್ ಕುಂಭಕೋಣಿ ಅವರಿಗೆ ಹೇಳಿದೆ.
ಕೆಲ ರಾಜಕಾರಣಿಗಳು ಮತ್ತು ಸೆಲೆಬ್ರಿಟಿಗಳಿಗೆ ಹೇಗೆ ಕೋವಿಡ್ ಔಷಧಿಗಳು ದೊರಕಿವೆ ಎಂಬುದರ ಕುರಿತು ತನಿಖೆ ಮುಂದುವರಿಸುವಂತೆ ನ್ಯಾಯಾಲಯ ಈ ಹಿಂದೆ ರಾಜ್ಯ ಸರಕಾರಕ್ಕೆ ಸೂಚನೆ ನೀಡಿತ್ತು.
ಈ ಕುರಿತಂತೆ ಬುಧವಾರ ನ್ಯಾಯಾಲಯಕ್ಕೆ ಕೆಲ ಮಾಹಿತಿ ನೀಡಿದ ಅಶುತೋಷ್, ಪರವಾನಗಿ ಹೊಂದಿಲ್ಲದೇ ಇದ್ದರೂ ಸಿದ್ದೀಖ್ ಅವರಿಗೆ ರೆಮ್ಡೆಸೆವಿರ್ ಪೂರೈಸಿದೆಯೆನ್ನಲಾದ ಬಿಡಿಆರ್ ಫೌಂಡೇಶನ್ ಎಂಬ ಟ್ರಸ್ಟ್ ವಿರುದ್ಧ ಡ್ರಗ್ಸ್ ಎಂಡ್ ಕಾಸ್ಮೆಟಿಕ್ಸ್ ಕಾಯಿದೆಯನ್ವಯ ಪ್ರಕರಣ ದಾಖಲಿಸಲಾಗಿದೆ ಹಾಗೂ ಸಂಸ್ಥೆಯ ನಾಲ್ಕು ನಿರ್ದೇಶಕರ ವಿರುದ್ಧ ಎಫ್‍ಐಆರ್ ದಾಖಲಾಗಿದೆ ಆದರೆ ಶಾಸಕರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ, ಏಕೆಂದರೆ ತಮ್ಮನ್ನು ಸಂಪರ್ಕಿಸಿದವರನ್ನು ಅವರು ಟ್ರಸ್ಟ್ ಬಳಿ ಕಳುಹಿಸಿದ್ದರು ಎಂದು ತನಿಖೆ ಕಂಡುಕೊಂಡಿದೆ ಎಂದು ತಿಳಿಸಿದರು.
ಸೋನು ಸೂದ್ ಅವರು ಗೋರೆಗಾಂವ್‍ನ ಲೈಫ್ ಲೈನ್ ಕೇರ್ ಆಸ್ಪತ್ರೆಯಲ್ಲಿರುವ ಫಾರ್ಮಸಿಗಳಿಂದ ಔಷಧಿ ಖರೀದಿಸಿದ್ದರು ಹಾಗೂ ಈ ಫಾರ್ಮಸಿಗಳು ಸಿಪ್ಲಾ ಸಂಸ್ಥೆಯಿಂದ ಔಷಧಿ ಪಡೆದುಕೊಂಡಿದ್ದವು, ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.