ಅದಾನಿ ಸಾಮ್ರಾಜ್ಯದಲ್ಲಿ ಕಂಪನ: ಮೂರು ದಿನಗಳಲ್ಲಿ 66 ಸಾವಿರ ಕೋಟಿ ರೂ. ನಷ್ಟ

ಹೊಸದಿಲ್ಲಿ,ಜೂ.18: ವಿಶ್ವದ ಸಿರಿವಂತರ ಪಟ್ಟಿಯಲ್ಲಿ ಶರವೇಗದಿಂದ ಮುನ್ನುಗ್ಗುತ್ತಿದ್ದ ಭಾರತದ ಉದ್ಯಮ ದಿಗ್ಗಜ ಗೌತಮ್ ಅದಾನಿ ಸಂಪತ್ತಿನಲ್ಲಿ ಭಾರೀ ಕುಸಿತವಾಗಿದ್ದು, ಕಳೆದ ಮೂರು ದಿನಗಳಲ್ಲಿ 9 ಶತಕೋಟಿ ಡಾಲರ್ (66,700 ಕೋಟಿ ರೂ.)ಗಳನ್ನು ಕಳೆದುಕೊಂಡಿದ್ದಾರೆ.
58 ವರ್ಷ ವಯಸ್ಸಿನ ಗೌತಮ್ ಅದಾನಿ ಅವರ ಒಡೆತನದ ಕಂಪೆನಿಗಳ ಶೇರುಗಳ ವೌಲ್ಯ ಪಾತಾಳಕ್ಕೆ ಕುಸಿಯುತ್ತಿದ್ದು, ಹೂಡಿಕೆದಾರರಲ್ಲಿ ಆತಂಕವುಂಟಾಗಿದೆಯೆಂದು ಬ್ಲೂಂಬರ್ಗ್ ವಾಣಿಜ್ಯ ಸುದ್ದಿಸಂಸ್ಥೆ ವರದಿ ಮಾಡಿದೆ.
ಕೆಲವೇ ದಿನಗಳ ಹಿಂದೆ ಏಶ್ಯದ ಅತ್ಯಂತ ಸಿರಿವಂತರ ಪಟ್ಟಿಯಲ್ಲಿ ಮುಖೇಶ್ ಅಂಬಾನಿಯ ಸನಿಹಕ್ಕೆ ಗೌತಮ್ ಅದಾನಿ ಬಂದಿದ್ದರು. ಆದರೆ ಈ ವಾರ ವಿಶ್ವದಲ್ಲೇ ಅತಿ ಹೆಚ್ಚು ನಷ್ಟ ಅನುಭವಿಸಿದ ಉದ್ಯಮಿಯಾಗಿ ಆದಾನಿ ಗುರುತಿಸಲ್ಪಟ್ಟಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ಆದಾನಿ ಅವರ ಅಸ್ತಿಯ ವೌಲ್ಯದಲ್ಲಿ ಒಂದೇ ಸವನೆ ಭಾರೀ ಏರಿಕೆಯುಂಟಾಗಿತ್ತು. ಆದರೆ ಆದಾನಿ ಕಂಪೆನಿಗಳಲ್ಲಿ ಹೂಡಿಕೆ ಮಾಡಲಾಗಿದ್ದ ಮಾರಿಶಸ್ ಮೂಲದ ಮೂರು ಹಣಕಾಸು ನಿಧಿಗಳನ್ನು ಭಾರತದ ರಾಷ್ಟ್ರೀಯ ಶೇರು ಡೆಪಾಸಿಟರಿ ಸಂಸ್ಥೆಯು ಸ್ತಂಭನಗೊಳಿಸಿರುವುದಾಗಿ ಇಕನಾಮಿಕ್ ಟೈಮ್ಸ್ ಪತ್ರಿಕೆಯು ವರದಿ ಮಾಡಿದ ಬಳಿಕ ಅದಾನಿ ಕಂಪೆನಿಯ ಶೇರುಗಳ ಮಹಾಪತನ ಆರಂಭಗೊಂಡಿತ್ತು.
ಅಲ್ಬುಲಾ ಇನ್ವೆಸ್ಟ್ ಫಂಡ್, ಕ್ರೆಸ್ಟಾ ಇನ್ವೆಸ್ಟ್ ಹಾಗೂ ಎಪಿಎಂಎಸ್ ಇನ್ವೆಸ್ಟ್ ಫಂಡ್ ಈ ಮೂರು ಹೂಡಿಕೆ ಸಂಸ್ಥೆಗಳ ಅದಾನಿ ಕಂಪೆನಿಗಳಲ್ಲಿ 600 ಕೋಟಿ ಅಮೆರಿಕನ್ ಡಾಲರ್ ಮೌಲ್ಯದ ಶೇರುಗಳನ್ನು ಹೊಂದಿವೆಯೆನ್ನಲಾಗಿದೆ.
ಆದರೆ ಇದೊಂದು ಘೋರವಾದ ತಪ್ಪು ವರದಿಯೆಂದು ಆದಾನಿ ಉದ್ಯಮ ಸಮೂಹ ಆಕ್ರೋಶ ವ್ಯಕ್ತಪಡಿಸಿದೆ. ಹೂಡಿಕೆದಾರ ಸಮುದಾಯವನ್ನು ತಪ್ಪುದಾರಿಗೆಳೆಯಲು ಉದ್ದೇಶಪೂರ್ವಕವಾಗಿ ನಡೆಸಿದ ಪ್ರಯತ್ನ ಇದಾಗಿದೆಯೆಂದು ಅದು ಹೇಳಿದೆ. ಆದರೆ ಆದಾನಿ ಉದ್ಯಮ ಸಮೂಹದಲ್ಲಿನ ಪಾರದರ್ಶಕತೆಯ ಕುರಿತಾಗಿ ಆತಂಕಕ್ಕೆ ಒಳಗಾಗಿರುವ ಹೂಡಿಕೆದಾರರು ತಮ್ಮ ಹೂಡಿಕೆಯನ್ನು ವಾಪಸ್ ತೆಗೆದುಕೊಳ್ಳಲಾರಂಭಿಸಿದ್ದಾರೆ ಎಂದು ಬ್ಲೂಮ್ ಬರ್ಗ್ ವರದಿ ಮಾಡಿದೆ.
ಮಾರಿಷಸ್ ಮೂಲದ ಮೂರು ಹೂಡಿಕೆ ಸಂಸ್ಥೆಗಳು ಅದಾನಿ ಸಮೂಹದ ಕಂಪೆನಿಗಳಲ್ಲಿ ತಮ್ಮ ಒಟ್ಟು ಆಸ್ತಿಯ ಶೇ.90ಕ್ಕೂ ಹೆಚ್ಚು ನಿಧಿಯನ್ನು ಹೂಡಿಕೆ ಮಾಡಿದ್ದಾರೆ ಎಂದು ಬ್ಲೂಮ್ ಬರ್ಗ್ ಇಂಟಲಿಜೆನ್ಸ್ ಸಂಸ್ಥೆ ವರದಿ ಮಾಡಿದೆ. ಈ ಹೂಡಿಕೆ ನಿಧಿಗಳ ನಿಜವಾದ ಮಾಲಕರು ಯಾರೆಂಬುದರ ಬಗ್ಗೆ ಸ್ಪಷ್ಟತೆ ದೊರೆಯಬೇಕಾಗಿದೆಯೆಂದು ಮುಂಬೈನ ಸ್ವತಂತ್ರ ಸಂಶೋಧನಾ ವಿಶ್ಲೇಷಕ ಹೇಮಿಂದ್ರ ಹಝಾರಿ ತಿಳಿಸಿದ್ದಾರೆ.
ಆದರೆ ಈ ಬಗ್ಗೆ ವಿವರವಾದ ಪ್ರತಿಕ್ರಿಯೆ ನೀಡಲು ಅದಾನಿ ಸಮೂಹದ ವಕ್ತಾರರು ನಿರಾಕರಿಸಿದ್ದಾರೆ. ಈ ವಿದೇಶಿ ಹೂಡಿಕೆದಾರ ಸಂಸ್ಥೆಗಳು ಅದಾನಿ ಎಂಟರ್ಪ್ರೈಸಸ್ ಲಿಮಿಟೆಡ್ ನಲ್ಲಿ ಕಳೆದ ಒಂದು ದಶಕಕ್ಕೂ ಹೆಚ್ಚು ಸಮಯದಿಂದ ಹೂಡಿಕೆ ಮಾಡಿದ್ದಾರೆಂದು ಅವರು ಜೂನ್ 14ರಂದು ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಶೇರುಮಾರುಕಟ್ಟೆಯಲ್ಲಿನ ವದಂತಿಗಳಿಂದ ಹೂಡಿಕೆದಾರರು ವಿಚಲಿತರಾಗಬಾರದೆಂದು ಅವರು ಮನವಿ ಮಾಡಿದ್ದಾರೆ.
ಅದಾನಿ ಶೇರುಗಳ ಮಹಾಪತನ
ಈ ವಾರದಲ್ಲಿ ಅದಾನಿ ಉದ್ಯಮ ಸಮೂಹದ ಶೇರುಗಳ ಮೌಲ್ಯ ಪಾತಾಳಕ್ಕೆ ಕುಸಿದಿದೆ.ಈ ಸಮೂಹದ ಅತ್ಯಂತ ಪ್ರತಿಷ್ಠಿತ ಸಂಸ್ಥೆಯಾದ ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ ನ ಶೇರುಗಳ ಮೌಲ್ಯ ಶೇ.7.7 ಶೇಕಡಕ್ಕೆ ಕುಸಿದಿದೆ. ಕಳೆದ ನಾಲ್ಕು ದಿನಗಳಲ್ಲಿ ಅದಾನಿ ಪೋರ್ಟ್ಸ್ ಆ್ಯಂಡ್ ಸ್ಪೆಶಲ್ ಇಕಾನಮಿಕ್ ರೆನ್ ಲಿಮಿಟೆಡ್ ನ ಶೇರು ಮೌಲ್ಯವು ಶೇ.23ರಷ್ಟು ಇಳಿಕೆಯಾಗಿದೆ. ಹಾಗೆಯೇ ಆದಾನಿ ಪವರ್ ಲಿಮಿಟೆಡ್, ಆದಾನ್ ಟೋಟಲ್ ಗ್ಯಾಸ್ ಲಿ. ಹಾಗೂ ಅದಾನಿ ಟ್ರಾನ್ಸ್ಮಿಶನ್ ಲಿ.ನ ಸಂಪತ್ತು ಕೂಡಾ ಶೇ.18ರಷ್ಟು ಕರಗಿದೆ. ಅದಾನಿ ಎಂಟರ್ಪ್ರೈಸಸ್ ನ ಶೇರುಗಳ ಮೌಲ್ಯ ಕೂಡಾ ಶೇ.15ರಷ್ಟು ಕುಸಿದಿದೆ. ಹೀಗೆ ಆದಾನಿ ಸಮೂಹದ ಶೇರುಗಳ ಮೌಲ್ಯ ಹಿಂದೆಂದೂ ಇಲ್ಲದಷ್ಟು ಪತನವನ್ನು ಕಂಡಿವೆ.
ಅದಾನಿ ಉದ್ಯಮ ಸಾಮ್ರಾಜ್ಯದಲ್ಲಿ ಕಂಪನ
ಕಳೆದ ಒಂದೆರಡು ವರ್ಷಗಳಲ್ಲಿ ಬಂದರುಗಳು, ಗಣಿಗಳು ಹಾಗೂ ವಿದ್ಯುತ್ ಸ್ಥಾವರಗಳ ಮೇಲೆ ಹೂಡಿಕೆಯನ್ನು ಹೆಚ್ಚಿಸುವ ಮೂಲಕ ಅದಾನಿಯ ಉದ್ಯಮ ಸಾಮ್ರಾಜ್ಯ ವಿಸ್ತರಣೆಗೊಳ್ಳುತ್ತಲೇ ಹೋಗಿತ್ತು
2020ರ ಆರಂಭದಿಂದೀಚೆಗೆ ಆದಾನಿ ಉದ್ಯಮ ಸಮೂಹದ ಕೆಲವು ಕಂಪೆನಿಗಳ ಶೇರುಗಳ ಮೌಲ್ಯದಲ್ಲಿ ಶೇ.500ರಷ್ಟು ಹೆಚ್ಚಳವುಂಟಾಗಿತ್ತು. ಪುನರ್ ನವೀಕರಣ ಯೋಗ್ಯ ಇಂಧನ, ವಿಮಾನ ನಿಲ್ದಾಣಗಳು, ಡೇಟಾ ಕೇಂದ್ರಗಳು ಹಾಗೂ ರಕ್ಷಣಾ ಗುತ್ತಿಗೆಯನ್ನು ಪಡೆಯುವ ಮೂಲಕ ಆದಾನಿ ಸಮೂಹದ ಉದ್ಯಮರಂಗದಲ್ಲಿ ನಾಗಾಲೋಟದ ಬೆಳವಣಿಗೆಯನ್ನು ಕಂಡಿತ್ತು. ಈ ತಿಂಗಳ ಆರಂಭದಲ್ಲಿ ಆದಾನಿಯ ಒಟ್ಟು ಸಂಪತ್ತಿನ ಮೌಲ್ಯ 80 ಶತಕೋಟಿ ಡಾಲರ್ಗಳಾಗಿದ್ದವು.