ಸ್ವರಾ ಭಾಸ್ಕರ್, ಟ್ವಿಟರ್ ನ ಭಾರತೀಯ ಮುಖ್ಯಸ್ಥರ ವಿರುದ್ಧ ದೂರು ದಾಖಲು

ಹೊಸದಿಲ್ಲಿ, ಜೂ.17: ಈ ತಿಂಗಳ ಆರಂಭದಲ್ಲಿ ಉತ್ತರಪ್ರದೇಶದ ಗಾಝಿಯಾಬಾದ್ನಲ್ಲಿ ಮುಸ್ಲಿಮ್ ವ್ಯಕ್ತಿಯ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಪ್ರಚೋದನಕಾರಿಯಾಗಿ ಟ್ವೀಟ್ ಮಾಡಿದ ಆರೋಪದಲ್ಲಿ ನಟಿ ಸ್ವರಾ ಭಾಸ್ಕರ್, ಟ್ವಿಟರ್ ಇಂಡಿಯಾದ ಆಡಳಿತ ನಿರ್ದೇಶಕ ಹಾಗೂ ಇತರ ಇಬ್ಬರ ವಿರುದ್ಧ ದಿಲ್ಲಿಯಲ್ಲಿ ದೂರು ದಾಖಲಾಗಿದೆ ಎಂದು ಮೂಲಗಳು ಹೇಳಿವೆ. ದಿಲ್ಲಿಯ ನ್ಯಾಯವಾದಿಯೊಬ್ಬರು ಬುಧವಾರ ದೂರು ದಾಖಲಿಸಿದ್ದು ಪೊಲೀಸರು ಇನ್ನೂ ಎಫ್ಐಆರ್ ದಾಖಲಿಸಿಲ್ಲ ಎಂದು ವರದಿಯಾಗಿದೆ.
ಗಾಝಿಯಾಬಾದ್ ನಲ್ಲಿ ನಡೆದ ಘಟನೆಯಿಂದ ಪ್ರೇರಿತಗೊಂಡ ಸ್ವರಾ ಭಾಸ್ಕರ್, ಪತ್ರಕರ್ತೆ ಅರ್ಫಾ ಖನೂಮ್ ಮತ್ತು ಆಸಿಫ್ ಖಾನ್ ಎಂಬ ವ್ಯಕ್ತಿ ತಮ್ಮ ಟ್ವಿಟರ್ ಹ್ಯಾಂಡಲ್ ನಲ್ಲಿ ಜನರಲ್ಲಿ ದ್ವೇಷವನ್ನು ಹರಡುವ ಪ್ರಚಾರ ಆರಂಭಿಸಿದ್ದಾರೆ. ಈ ಘಟನೆ ಕೋಮುದ್ವೇಷಕ್ಕೆ ಸಂಬಂಧಿಸಿಲ್ಲ ಎಂದು ತಿಳಿದಿದ್ದರೂ, ಟ್ವಿಟರ್ನ ಭಾರತೀಯ ವಿಭಾಗದ ಮುಖ್ಯಸ್ಥ ಮನೀಷ್ ಮಹೇಶ್ವರಿ ಈ ಟ್ವೀಟ್ ಗಳನ್ನು ತೆಗೆದುಹಾಕಲು ಕ್ರಮ ಕೈಗೊಂಡಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಉತ್ತರಪ್ರದೇಶ ಪೊಲೀಸರು ದಾಖಲಿಸಿರುವ ಪ್ರಕರಣದಲ್ಲಿ ‘ಪ್ರಕರಣಕ್ಕೆ ಸಂಬಂಧಿಸಿದ ತಪ್ಪು ಮಾಹಿತಿಯನ್ನು ಟ್ವಿಟರ್ ತೆಗೆದುಹಾಕಿಲ್ಲ’ ಎಂದು ಉಲ್ಲೇಖಿಸಲಾಗಿದೆ. ಜೊತೆಗೆ, ಗಲಭೆ, ದ್ವೇಷ ಮತ್ತು ಕ್ರಿಮಿನಲ್ ಪಿತೂರಿಯನ್ನು ಉತ್ತೇಜಿಸುವ ಉದ್ದೇಶ ಹೊಂದಿರುವುದು ಸೇರಿದಂತೆ ಟ್ವಿಟರ್ ವಿರುದ್ಧ ಹಲವು ಆರೋಪಗಳಿವೆ.