ಜಾಮೀನು ಮನವಿ ಆಲಿಕೆಯ ನಿರಾಕರಣೆ ಆರೋಪಿಯ ಸ್ವಾತಂತ್ರ್ಯದ ಉಲ್ಲಂಘನೆ: ಸುಪ್ರೀಂ ಕೋರ್ಟ್

ಹೊಸದಿಲ್ಲಿ, ಜೂ. 17: ನ್ಯಾಯಾಲಯಗಳು ಜಾಮೀನು ಮನವಿಯನ್ನು ಆಲಿಸಲು ನಿರಾಕರಿಸುವುದು ಆರೋಪಿಗಳ ಹಕ್ಕುಗಳ ಉಲ್ಲಂಘನೆ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.
ವೈಯುಕ್ತಿಕ ಸ್ವಾತಂತ್ರಕ್ಕೆ ಸಂಬಂಧಿಸಿದ ತುರ್ತು ಪ್ರಕರಣಗಳನ್ನು ಯಾವುದೇ ರೀತಿಯಲ್ಲಿ ವಿಳಂಬ ಮಾಡದೆ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ನಿಯಮಿತ ಜಾಮೀನಿಗೆ ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ಪರಿಗಣಿಸದೇ ಇರುವುದು ಕಸ್ಟಡಿಯಲ್ಲಿರುವ ವ್ಯಕ್ತಿಯ ಸ್ವಾತಂತ್ರಕ್ಕೆ ಧಕ್ಕೆ ಉಂಟು ಮಾಡುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿ ಕೈಗಾರಿಕೋದ್ಯಮಿ ಚುನ್ನಿ ಲಾಲ್ ಗಬ್ಬಾ ಅವರು ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು. ಚುನ್ನಿ ಲಾಲ್ ಗಬ್ಬಾ ಅವರ ಜಾಮೀನು ಮನವಿ ಪಂಜಾಬ್ ಹಾಗೂ ಹರ್ಯಾಣ ನ್ಯಾಯಾಲಯದಲ್ಲಿ 2020 ಫೆಬ್ರವರಿಯಿಂದ ಬಾಕಿ ಇದೆ. ಅವಧಿ ಪೂರ್ವ ವಿಚಾರಣೆಯ ಮನವಿಯನ್ನು ಉಚ್ಚ ನ್ಯಾಯಾಲಯ ತಿರಸ್ಕರಿಸಿದ ಬಳಿಕ ಅವರು ಸುಪ್ರೀಂ ಕೋರ್ಟ್ ನ ಮೆಟ್ಟಿಲೇರಿದ್ದಾರೆ.
‘‘ತನ್ನ ಜಾಮೀನು ಅರ್ಜಿಯ ಆಲಿಕೆಯ ಹಕ್ಕು ಆರೋಪಿಗೆ ಇದೆ. ಮನವಿಯ ಆಲಿಕೆಯ ನಿರಾಕರಣೆ ಆರೋಪಿಗೆ ಖಾತರಿ ನೀಡಲಾದ ಹಕ್ಕು ಹಾಗೂ ಸ್ವಾತಂತ್ರದ ಉಲ್ಲಂಘನೆಯಾಗುತ್ತದೆ ’’ ಎಂದು ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಹಾಗೂ ವಿ. ರಾಮಸುಬ್ರಹ್ಮಣೀಯನ್ ಅವರಿದ್ದ ಸುಪ್ರೀಂ ಕೋರ್ಟ್ ನ್ಯಾಯಪೀಠ ಹೇಳಿದೆ.
ಕೈಗಾರಿಕೋದ್ಯಮಿ ಚುನ್ನಿ ಲಾಲ್ ಗಬ್ಬಾ ಅವರ ಮನವಿಯನ್ನು ಆದಷ್ಟು ಬೇಗ ಆಲಿಕೆ ನಡೆಸುವಂತೆ ಸುಪ್ರೀಂ ಕೋರ್ಟ್ ಪಂಜಾಬ್ ಹಾಗೂ ಹರ್ಯಾಣ ಉಚ್ಚ ನ್ಯಾಯಾಲಯಕ್ಕೆ ಸೂಚಿಸಿತು. ಕೊರೋನ ಸಾಂಕ್ರಾಮಿಕ ರೋಗದ ಪ್ರಸ್ತುತ ಪರಿಸ್ಥಿತಿಯಲ್ಲಿ ಅರ್ಧಕ್ಕಿಂತ ಹೆಚ್ಚು ನ್ಯಾಯಾಧೀಶರು ಪರ್ಯಾಯ ದಿನಗಳಲ್ಲಿ ಆಲಿಕೆ ನಡೆಸಬೇಕು. ಆಗ ಸಂಕಷ್ಟಕ್ಕೀಡಾದ ವ್ಯಕ್ತಿಯ ಮನವಿಯ ಆಲಿಕೆ ಸಾಧ್ಯ ಎಂದು ನ್ಯಾಯಪೀಠ ಹೇಳಿತು.