ತಬ್ಲೀಗಿ ಜಮಾಅತ್ ವಿರುದ್ಧ ಕೋಮುದ್ವೇಷಕ್ಕೆ ಪ್ರಚೋದನೆ : ನ್ಯೂಸ್18 ಕನ್ನಡ, ಸುವರ್ಣ ನ್ಯೂಸ್‍ಗೆ ದಂಡ

ಹೊಸದಿಲ್ಲಿ: ಕಳೆದ ವರ್ಷ ತಬ್ಲೀಗಿ ಜಮಾಅತ್ ಸದಸ್ಯರನ್ನು ಟಾರ್ಗೆಟ್ ಮಾಡಿ ವರದಿ ಮಾಡಿದ್ದ ನ್ಯೂಸ್18 ಕನ್ನಡ ಮತ್ತು ಸುವರ್ಣ ನ್ಯೂಸ್ ಕನ್ನಡ ವಾಹಿನಿಗಳು ಹಾಗೂ ಆಂಗ್ಲ ಸುದ್ದಿ ವಾಹಿನಿ ಟೈಮ್ಸ್ ನೌ ಈಗ ಕ್ರಮ ಎದುರಿಸುವಂತಾಗಿದೆ ಎಂದು thequint ವರದಿ ಮಾಡಿದೆ.
ರಾಜಧಾನಿಯಲ್ಲಿ ನಡೆದ ನಿಜಾಮುದ್ದೀನ್ ಮರ್ಕಝ್‍ನಲ್ಲಿ ನಡೆದ ತಬ್ಲೀಗಿ ಜಮಾಅತ್ ಕೋವಿಡ್ ಹರಡಲು ಕಾರಣವಾಗಿದೆ ಎಂದು ವರದಿ ಮಾಡಿ ಈ ಮೂರೂ ಸುದ್ದಿ ವಾಹಿನಿಗಳು ಪತ್ರಿಕೋದ್ಯಮದ ನೀತಿಸಂಹಿತೆಯನ್ನು ಉಲ್ಲಂಘಿಸಿವೆ ಎಂದು ಅವುಗಳ ಪೈಕಿ ಎರಡು ಕನ್ನಡ ವಾಹಿನಿಗಳಿಗೆ ದಂಡ ವಿಧಿಸಿ ಹಾಗೂ ಆಂಗ್ಲ ವಾಹಿನಿಗೆ ಎಚ್ಚರಿಕೆ ನೀಡಿ ಜೂನ್ 16ರಂದು ನ್ಯಾಷನಲ್ ಬ್ರಾಡ್‍ಕಾಸ್ಟಿಂಗ್ ಸ್ಟಾಂಡರ್ಡ್ಸ್ ಅಥಾರಿಟಿ (ಎನ್‍ಬಿಎಸ್‍ಎ) ಆದೇಶ ಹೊರಡಿಸಿದೆ.
ಕ್ಯಾಂಪೇನ್ ಅಗೇನ್ಸ್ಟ್ ಹೇಟ್ ಸ್ಪೀಚ್ ಎಂಬ ಸಂಘಟನೆ ಕಳೆದ ವರ್ಷ ಸಲ್ಲಿಸಿದ್ದ ದೂರಿನ ಆಧಾರದಲ್ಲಿ ಈ ಆದೇಶ ಹೊರಡಿಸಲಾಗಿದೆ.
ನ್ಯೂಸ್18 ಕನ್ನಡ ವಾಹಿನಿಗೆ ರೂ 1 ಲಕ್ಷ ದಂಡ ಹಾಗೂ ಸುವರ್ಣ ನ್ಯೂಸ್‍ಗೆ ರೂ 50,000 ದಂಡ ವಿಧಿಸಲಾಗಿದ್ದು ಈ ಮೊತ್ತವನ್ನು ಅವುಗಳು ಏಳು ದಿನಗಳೊಳಗಾಗಿ ಪಾವತಿಸಬೇಕಿದೆ.
ವಿವಿಧ ಕೋಮುಗಳ ನಡುವೆ ವೈಷಮ್ಯ ಉಂಟು ಮಾಡಬಹುದಾದ ಸೂಕ್ಷ್ಮ ವಿಚಾರವೊಂದರ ಕುರಿತು ಕಾರ್ಯಕ್ರಮ ಪ್ರಸಾರ ಮಾಡಿದ್ದಕ್ಕೆ ಟೈಮ್ಸ್ ನೌ ವಾಹಿನಿಗೆ ಎನ್‍ಬಿಎಸ್‍ಎ ಎಚ್ಚರಿಕೆ ನೀಡಿದೆ.