ಜೂ. 21: ವಿದ್ಯುತ್ ದರ ಏರಿಕೆ ಹಿಂಪಡೆಯಲು ಆಗ್ರಹಿಸಿ ಪ್ರತಿಭಟನೆ
ಮಂಗಳೂರು, ಜೂ.18: ರಾಜ್ಯ ಸರಕಾರ ವಿದ್ಯುತ್ ದರ ಏರಿಕೆಯನ್ನು ಹಿಂಪಡೆಯಬೇಕು ಮತ್ತು ಲಾಕ್‌ಡೌನ್ ಅವಧಿಯ ಮೂರು ತಿಂಗಳ ವಿದ್ಯುತ್ ಬಿಲ್ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಜೂ.21ರಂದು ರಾತ್ರಿ ರಾಜ್ಯಾದ್ಯಂತ ಘಟಕ ಮಟ್ಟದಲ್ಲಿ ಚಿಮಣಿ, ಲಾಟೀನು, ದೊಂದಿ, ಕ್ಯಾಂಡಲ್ ಪ್ರದರ್ಶಿಸಿ ಪ್ರತಿಭಟನೆಗೆ ನಡೆಸಲು ಡಿವೈಎಫ್‌ಐ ಕರ್ನಾಟಕ ರಾಜ್ಯ ಸಮಿತಿ ಕರೆ ನೀಡಿದೆ.
ರಾಜ್ಯ ಸರಕಾರ ವಿದ್ಯುತ್ ದರವನ್ನು ಸತತವಾಗಿ ಏರಿಸುತ್ತಿದೆ. ವಿದ್ಯುತ್ ಬಳಕೆಯ ಯಾವುದೇ ಐಷಾರಾಮಿ ವಸ್ತುಗಳನ್ನು ಹೊಂದಿರದ ಸಾಮಾನ್ಯ ಕುಟುಂಬಗಳೂ ಇಂದು ತಿಂಗಳಿಗೆ ಸಾವಿರ ರೂ.ಗೂ ಹೆಚ್ಚು ವಿದ್ಯುತ್ ಬಿಲ್ ಭರಿಸಬೇಕಾದ ಸ್ಥಿತಿ ಉಂಟಾಗಿದೆ. ಅದರಲ್ಲೂ ಕೊರೋನ ಹಾವಳಿಯಿಂದ ಜನತೆ ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿರುವ ಒಂದು ವರ್ಷದ ಅವಧಿಯಲ್ಲಿ ಒಂದಕ್ಕಿಂತಲೂ ಹೆಚ್ಚು ಬಾರಿ ವಿದ್ಯುತ್ ದರ ಏರಿಸಿರುವುದು ಸರಕಾರದ ಜನ ವಿರೋಧಿ ಧೋರಣೆಯಾಗಿದೆ. ರಾಜ್ಯ ಸರಕಾರವು ವಿದ್ಯುತ್, ಕುಡಿಯುವ ನೀರುಗಳ ಮೂರು ತಿಂಗಳ ಬಿಲ್ಗಳನ್ನು ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ಮಾಡಲಾಗುವುದು ಎಂದು ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.





