ಪೂರ್ವ ಸಿದ್ಧತೆಯಿಲ್ಲದೆ ನೂತನ ಶಿಕ್ಷಣ ನೀತಿ ಜಾರಿಗೆ ಎಬಿವಿಪಿ ಖಂಡನೆ

ಬೆಂಗಳೂರು, ಜೂ.18: ಸರಿಯಾದ ಪೂರ್ವಸಿದ್ಧತೆ ಮಾಡಿಕೊಳ್ಳದೆ ನೂತನ ಶಿಕ್ಷಣ ನೀತಿ-2020ನ್ನು ಜಾರಿ ಮಾಡುವುದು ಸರಿಯಲ್ಲವೆಂದು ಎಬಿವಿಪಿ(ಅಖಿಲ ಭಾರತ ವಿದ್ಯಾರ್ಥಿ ಪರಿಷತ್) ರಾಜ್ಯ ಕಾರ್ಯದರ್ಶಿ ಪ್ರತೀಕ ಮಾಳಿ ಖಂಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಹು ಶಿಸ್ತಿನಿಂದ ಕೂಡಿರುವ ಹೊಸ ಶಿಕ್ಷಣ ನೀತಿ 2020ಯನ್ನು ಎಬಿವಿಪಿ ಹಿಂದಿನಿಂದಲೂ ಸ್ವಾಗತಿಸಿದೆ. ಈ ಕುರಿತು ರಾಜ್ಯಾದ್ಯಂತ ವಿಚಾರ ಸಂಕಿರಣಗಳನ್ನು ಹಮ್ಮಿಕೊಂಡಿದೆ. ಆದರೆ, ಯಾವುದೇ ಪೂರ್ವತಯಾರಿ ಇಲ್ಲದೆ ಏಕಾಏಕಿ ಅನುಷ್ಠಾನಕ್ಕೆ ತರುವುದಕ್ಕೆ ನಮ್ಮ ವಿರೋಧವಿದೆ ಎಂದು ತಿಳಿಸಿದ್ದಾರೆ.
ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ್ ವಿಶ್ವವಿದ್ಯಾಲಯಗಳ ಕುಲಪತಿಗಳ ಜೊತೆಗೆ ಹೊಸ ಶಿಕ್ಷಣ ನೀತಿಯ ಕುರಿತು ವರ್ಚುವಲ್ ಸಭೆ ಮಾಡಿದ್ದಾರೆ. ಜೂ.15ಕ್ಕೆ ಸಭೆ ಮಾಡಿ ಜುಲೈ ಹದಿನೈದಕ್ಕೆ ಪಠ್ಯಪುಸ್ತಕ ರಚನಾ ಸಮಿತಿ ರಚಿಸಲು ವರದಿ ನೀಡುವಂತೆ ತಿಳಿಸಿದ್ದಾರೆ. ಇಷ್ಟು ಕಡಿಮೆ ಅವಧಿಯಲ್ಲಿ, ಅದು ಕೋವಿಡ್ 19ರ ಸಂದರ್ಭದಲ್ಲಿ, ಎಲ್ಲರಿಗೂ ಮಂಕು ಕವಿದ ಹೊತ್ತಿನಲ್ಲಿ ಈ ರೀತಿ ನಿರ್ಧಾರ ತೆಗೆದುಕೊಳ್ಳುವುದು ಎಷ್ಟು ಸರಿಯೆಂದು ಅವರು ಪ್ರಶ್ನಿಸಿದ್ದಾರೆ.
2021-22 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿಯೇ ಹೊಸಶಿಕ್ಷಣ ನೀತಿ ಅಳವಡಿಸಿಕೊಳ್ಳಲು ಸರಕಾರ ಮುಂದಾಗಿದೆ. ಆದರೆ, ಹೊಸಶಿಕ್ಷಣ ನೀತಿಗೆ ಬೇಕಾದ ಯಾವ ಸಿದ್ಧತೆಯು ಇದ್ದಂತಿಲ್ಲ. ಬಹುಮುಖ್ಯವಾಗಿ ಹೊಸ ಶಿಕ್ಷಣ ನೀತಿಯ ವಿಶೇಷತೆಗಳ ಬಗ್ಗೆ ವಿದ್ಯಾರ್ಥಿ ಅಧ್ಯಾಪಕರಲ್ಲಿ ಜಾಗೃತಿ, ಉತ್ತಮ ಗುಣಮಟ್ಟದ ಪಠ್ಯಪುಸ್ತಕಗಳ ರಚನೆ, ವಿದ್ಯಾರ್ಥಿಗಳ ಪಠ್ಯಕ್ರಮದ ಬಗ್ಗೆ ವಿಶೇಷ ಕಾಳಜಿ, ಬೋಧಿಸುವ ಅಧ್ಯಾಪಕರ ತರಬೇತಿಗೆ ಒತ್ತು, ಪರೀಕ್ಷಾ ವಿಧಾನಗಳಲ್ಲಿ ಬಹುಮುಖ್ಯ ಮಾರ್ಪಾಡು ಇತ್ಯಾದಿಗಳನ್ನು ಮಾಡಬೇಕು. ಆದರೆ, ಇದ್ಯಾವುದನ್ನು ಮಾಡದೆ ಸರಕಾರ ಅನುಷ್ಠಾನಕ್ಕೆ ಮುಂದಾಗಿದೆ. ಹೀಗಾಗಿ ಹೊಸ ಶಿಕ್ಷಣ ನೀತಿಯನ್ನು ತರಾತುರಿಯಲ್ಲಿ ಅನುಷ್ಠಾನಕ್ಕೆ ತರಬಾರದೆಂದು ಅವರು ಒತ್ತಾಯಿಸಿದ್ದಾರೆ.
ಹಕ್ಕೊತ್ತಾಯಗಳು
-ಹೊಸ ಶಿಕ್ಷಣ ನೀತಿಯ ಆಶಯಕ್ಕನುಗುಣವಾಗಿ ಉತ್ತಮ ರೀತಿಯ ಪಠ್ಯಕ್ರಮ ರಚನೆಯಾಗಬೇಕು, ರಚನೆಯ ನಂತರ ಅಧ್ಯಾಪಕರ-ಪರಿಣಿತರ ಅಭಿಪ್ರಾಯ ಸಂಗ್ರಹಿಸಬೇಕು.
-ಉತ್ತಮ ಗುಣಮಟ್ಟದ ಪಠ್ಯಪುಸ್ತಕಗಳು ಯೋಗ್ಯ ವ್ಯಕ್ತಿಗಳಿಂದ ರಚಿತವಾಗಬೇಕು.
-ಹೊಸ ಶಿಕ್ಷಣ ನೀತಿಗೆ ಅನುಸಾರವಾಗಿ ಅಧ್ಯಾಪಕರಿಗೆ ತರಬೇತಿ ನೀಡಬೇಕು ಹಾಗೂ ಸೂಕ್ತ ಕಾರ್ಯಾಗಾರಗಳನ್ನು ಮಾಡಬೇಕು.
-ಸಮಾಜದ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಕಲಿಕೆಯ ಸಮಾನ ಅವಕಾಶ ಸೌಲಭ್ಯ ಕಲ್ಪಿಸಬೇಕು.
-ಪರೀಕ್ಷಾ ವಿಧಾನಗಳಲ್ಲಿ ಸೂಕ್ತ ಮಾರ್ಪಾಡು ಮಾಡಬೇಕು.
-ಕನ್ನಡ ಭಾಷಾ ಅಧ್ಯಯನಕ್ಕೆ ಈ ಹಿಂದಿನಂತೆ 2 ವರ್ಷಗಳ ಅವಕಾಶ ಕಲ್ಪಿಸಬೇಕು.







