ದ.ಕ. ಜಿಲ್ಲೆಯಲ್ಲಿ ರವಿವಾರ ರೆಡ್ ಅಲರ್ಟ್ : ಹವಾಮಾನ ಇಲಾಖೆ
ಮಂಗಳೂರು, ಜೂ.18: ದ.ಕ. ಜಿಲ್ಲೆಯಲ್ಲಿ ಶುಕ್ರವಾರ ಮುಂಗಾರು ಮಳೆಯ ಅಬ್ಬರ ಮತ್ತಷ್ಟು ಕಡಿಮೆಯಾಗಿದೆ. ಹಗಲಿಡೀ ಜಿಲ್ಲಾದ್ಯಂತ ಮೋಡ ಕವಿದುದಕ್ಕಿಂತಲೂ ಬಿಸಿಲಿನ ವಾತಾವರಣವಿತ್ತು. ಆಗಾಗ್ಗೆ ಒಂದೆರಡು ಬಾರಿ ಸಾಮಾನ್ಯ ಮಳೆಯಾಗಿದೆ. ಅದರ ಮಧ್ಯೆಯೂ ಬಲವಾದ ಗಾಳಿ ಬೀಸುತ್ತಿತ್ತು.
ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದಲ್ಲಿ ಸಾಧಾರಣ ಮಳೆಯಾಗಿದೆ. ಗಾಳಿಯಿಂದಾಗಿ ಹಲವು ಕಡೆ ಮರಗಳು ಮತ್ತು ವಿದ್ಯುತ್ ಕಂಬಗಳು ಧರಾಶಾಹಿಯಾಗಿವೆ. ಜಿಲ್ಲೆಯಲ್ಲಿ ಗುರುವಾರ ಸಂಜೆಯಿಂದ ಶುಕ್ರವಾರ ಸಂಜೆಯವರೆಗೆ 17 ಮನೆಗಳು ಭಾಗಶಃ ಹಾನಿಗೀಡಾಗಿವೆ. ಅದರಲ್ಲಿ ಬಂಟ್ವಾಳದ 7, ಮಂಗಳೂರಿನ 5, ಕಡಬದ 4, ಪುತ್ತೂರಿನ 1 ಮನೆ ಸೇರಿದೆ.
ಶನಿವಾರ ಮುಂಜಾನೆಯವರೆಗೆ ಹವಾಮಾನ ಇಲಾಖೆಯು ರೆಡ್ ಅಲರ್ಟ್ ಘೋಷಿಸಿದೆ. ಬಳಿಕ ಆರೆಂಜ್ ಅಲರ್ಟ್ ಇರಲಿದೆ. ರವಿವಾರಕ್ಕೆ ರೆಡ್ ಅಲರ್ಟ್ ಇದ್ದರೆ, ನಂತರ ಯಾವುದೇ ಮುನ್ಸೂಚನೆ ಇಲ್ಲ ಎಂದು ಹವಾಮಾನ ಇಲಾಖೆಯು ತಿಳಿಸಿದೆ.
ಮಂಗಳೂರಿನಿಂದ ಕಾರವಾರದವರೆಗೆ ಸಮುದ್ರಲ್ಲಿ 3.5-4.8 ಮೀ. ಎತ್ತರದ ಅಲೆಗಳು ದಡಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ. ಅಲ್ಲದೆ ಶನಿವಾರ ಗಂಟೆಗೆ 40-50 ಕಿ.ಮೀ. ವೇಗದಲ್ಲಿ ಬಲವಾದ ಗಾಳಿ ಬೀಸಲಿದೆ. ಹಾಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಎಚ್ಚರಿಕೆ ನೀಡಲಾಗಿದೆ.
ಬೆಳ್ತಂಗಡಿ ಗರಿಷ್ಠ ಮಳೆ
ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗಿನವರೆಗೆ ಬೆಳ್ತಂಗಡಿಯಲ್ಲಿ ಗರಿಷ್ಠ 54.6 ಮಿ.ಮೀ. ಮಳೆ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.







