‘ಹಡೀಲು ಗದ್ದೆಯಲ್ಲಿ ಭತ್ತ ಬೆಳೆಯೋಣ ಯೋಜನೆ ಯಶಸ್ವಿಗೊಳಿಸಿ’

ಮಂಗಳೂರು, ಮಾ.18: ಹಡೀಲು ಗದ್ದೆಯಲ್ಲಿ ಭತ್ತ ಬೆಳೆಯುವ ರೈತರಿಗೆ ಸರಕಾರ ಸೂಕ್ತ ಸೌಲಭ್ಯ ನೀಡಲಿದೆ. ಇದರ ಪ್ರಯೋಜನವನ್ನು ಪಡೆದು ಸರಕಾರದ ‘ಹಡೀಲು ಗದ್ದೆಯಲ್ಲಿ ಭತ್ತ ಬೆಳೆಯೋಣ’ ಯೋಜನೆ ಯಶಸ್ವಿಗೊಳಿಸಬೇಕು ಎಂದು ಶಾಸಕ ಡಾ.ವೈ.ಭರತ್ ಶೆಟ್ಟಿ ತಿಳಿಸಿದ್ದಾರೆ.
ಎಡಪದವು ಗ್ರಾಪಂ ಸಭಾಂಗಣದಲ್ಲಿ ಪಂಚಾಯತ್ ವ್ಯಾಪ್ತಿಯ ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆಯಲ್ಲಿ ಯೋಜನೆಯ ಸಮಗ್ರ ಮಾಹಿತಿ ನೀಡಿದರು. ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಹಡೀಲು ಗದ್ದೆಯಲ್ಲಿ ಭತ್ತ ಬೆಳೆಯೋಣ ಕಾರ್ಯಕ್ರಮವನ್ನು ಅನುಷ್ಠಾನ ಗೊಳಿಸಲು ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಸಭೆ ನಡೆದಿದ್ದು, ಮುಂದುವರಿದ ಭಾಗವಾಗಿ ಶುಕ್ರವಾರ ಸಭೆ ನಡೆಯಿತು.
ಎಡಪದವು ಗ್ರಾಪಂ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕುಪ್ಪೆಪದವು, ಮುತ್ತೂರು, ಕೊಂಪದವು, ಮುಚ್ಚೂರು, ಬಡಗ, ಪಂಚಾಯತ್, ತೆಂಕ ಎಡಪದವು ಗ್ರಾಪಂ ಮಟ್ಟದ ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆ ನಡೆಯಿತು. ಶಾಸಕರೊಂದಿಗೆ ತಾಪಂ ಮಾಜಿ ಸದಸ್ಯರಾದ ನಾಗೇಶ್ ಶೆಟ್ಟಿ, ಸ್ಥಳೀಯ ಪಂಚಾಯತ್ ಅಧ್ಯಕ್ಷರಾದ ಸುಕುಮಾರ್, ಹರೀಶ್, ಮೋಹಿನಿ, ಡೆಪ್ಯೂಟಿ ತಹಶೀಲ್ದಾರ್ ಶಿವಪ್ರಸಾದ್, ಸಹಾಯಕ ಕೃಷಿ ನಿರ್ದೇಶಕಿ ವೀಣಾ ರೈ ಮತ್ತಿತರರು ಉಪಸ್ಥಿತರಿದ್ದರು.





