ಮರವೂರು ಸೇತುವೆ ಕುಸಿತ ಹಿನ್ನೆಲೆ; ಎಸ್‌ಇಝೆಡ್ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ ನೀಡಿ: ಅಭಯಚಂದ್ರ ಜೈನ್ ಆಗ್ರಹ

ಮಂಗಳೂರು, ಜೂ, 18: ಮರವೂರು ಸೇತುವೆ ಕುಸಿತಕ್ಕೊಳಗಾದ ಹಿನ್ನೆಲೆಯಲ್ಲಿ ಮರವೂರು ಮತ್ತು ಬಜ್ಪೆ ನಾಗರೀಕರ ಸಂಚಾರಕ್ಕೆ ಜೋಕಟ್ಟೆಯ ಎಸ್‌ಇಝೆಡ್ ರಸ್ತೆಯಲ್ಲಿ ಅವಕಾಶ ನೀಡಬೇಕೆಂದು ಮಾಜಿ ಸಚಿವ ಅಭಯಚಂದ್ರ ಜೈನ್ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಮರವೂರು ಸೇತುವೆ ಕುಸಿತಕ್ಕೊಳಗಾದ ಹಿನ್ನೆಲೆಯಲ್ಲಿ ಮರವೂರು, ಬಜ್ಪೆ ನಾಗರೀಕರ ಸಂಚಾರಕ್ಕೆ ಜೋಕಟ್ಟೆಯಾಗಿ ಸಂಚರಿಸಲು ಬದಲಿ ಮಾರ್ಗ ಕಲ್ಪಿಸಲಾಗಿದೆ. ಜೋಕಟ್ಟೆ ರಸ್ತೆ ಇಕ್ಕಟ್ಟಾಗಿದ್ದು, ವಾಹನ ಸಂಚಾರಕ್ಕೆ ಅನಾನುಕೂಲವಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಸೇತುವೆ ದುರಸ್ತಿಯಾಗುವರೆಗಿನ ಎರಡು ತಿಂಗಳ ಕಾಲ ಕಳವಾರಿನಿಂದ ಜೋಕಟ್ಟೆಯ ಟೋಟಲ್ ಗ್ಯಾಸ್ ಸಮೀಪ ಜೋಕಟ್ಟೆಯ ಮುಖ್ಯರಸ್ತೆಯನ್ನು ಸಂಪರ್ಕಸುವ ಎಸ್‌ಇಝೆಡ್ ರಸ್ತೆವನ್ನು ಬದಲಿ ಮಾರ್ಗವಾಗಿ ಕಲ್ಪಿಸಿದರೆ ಸಾರ್ವಜನಿಕರ ಸಂಚಾರಕ್ಕೆ ಉತ್ತಮ ಎಂದಿದ್ದಾರೆ.
ಸೇತುವೆ ಕುಸಿತಕ್ಕೊಳಗಾಗಿ ಸಂಚಾರ ಅಸ್ತವ್ಯಸ್ತವಾಗಿರುವುದು ನಾಗರೀಕರ ಸಮಸ್ಯೆ. ನಾಗರೀಕರ ಸಮಸ್ಯೆ ನಿವಾರಣೆ ಮುಖ್ಯ ಎಂದಿರುವ ಜೈನ್, ಈ ಸಂಬಂಧ ಎಸ್‌ಇಝೆಡ್‌ನ ಮುಖ್ಯಸ್ಥರೊಂದಿಗೆ ಚರ್ಚಿಸಲಾಗಿದೆ. ಅಲ್ಲದೆ, ಯುವ ಕಾಂಗ್ರೆಸ್ ಮುಖಂಡರಾದ ಮಿಥುನ್ ರೈ ಅವರೊಂದಿಗೆ ಜಿಲ್ಲಾಧಿಕಾರಿಯವರನ್ನೂ ಭೇಟಿ ಮಾಡಿ ಮರವೂರು ಮತ್ತು ಬಜ್ಪೆ ನಾಗರೀಕರ ಸಂಚಾರಕ್ಕೆ ಜೋಕಟ್ಟೆಯ ಎಸ್‌ಇಝೆಡ್ ರಸ್ತೆಯಲ್ಲಿ ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದೇವೆ. ಈ ಬಗ್ಗೆ ಜಿಲ್ಲಾಧಿಕಾರಿಯವರು ಸೂಕ್ತ ಕ್ರಮಕೈಗಳ್ಳುತ್ತಾರೆ ಎಂಬ ನಂಬಿಕೆ ಇದೆ ಎಂದು ಅಭಯಚಂದ್ರ ಜೈನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.







