ಸಾಮಾಜಿಕ ತಾಣದಲ್ಲಿ ಮಹಿಳೆಯರ ಗಮನಸೆಳೆಯಲು ಭಾರತೀಯ ಸೇನಾ ಕ್ಯಾಪ್ಟನ್ ನಂತೆ ನಟಿಸುತ್ತಿದ್ದ ವ್ಯಕ್ತಿಯ ಬಂಧನ

ಹೊಸದಿಲ್ಲಿ: ಸೇನಾಧಿಕಾರಿಯಂತೆ ನಟಿಸುತ್ತಿದ್ದ 40 ವರ್ಷದ ವ್ಯಕ್ತಿಯನ್ನು ದಿಲ್ಲಿ ಪೊಲೀಸರು ಶುಕ್ರವಾರ ದಿಲ್ಲಿಯ ಅರ್ಚನಾ ರೆಡ್ ಲೈಟ್ ಗ್ರೇಟರ್ ಕೈಲಾಶ್ -1ರ ಬಳಿ ಬಂಧಿಸಿದ್ದಾರೆ.
ಆರೋಪಿಯನ್ನು ಹೊಸದಿಲ್ಲಿಯ ಮೋಹನ್ ಗಾರ್ಡನ್ ನಿವಾಸಿ ದಿಲೀಪ್ ಕುಮಾರ್ (40) ಎಂದು ಗುರುತಿಸಲಾಗಿದೆ.
ರಹಸ್ಯ ಮಾಹಿತಿಯ ಮೇರೆಗೆ ತಂಡವನ್ನು ಅರ್ಚನಾ ರೆಡ್ ಲೈಟ್ ಬಳಿ ನಿಯೋಜಿಸಲಾಗಿದ್ದು, ಸೇನೆಯ ಸಮವಸ್ತ್ರದಲ್ಲಿದ್ದ ಆರೋಪಿಯನ್ನು ಬಂಧಿಸಲಾಗಿದೆ.
ಪೊಲೀಸರು ದಿಲೀಪ್ ಕುಮಾರ್ ರ್ಯಾಂಕ್ (ಎನ್‌ಕೆ) ಪಿಪಿಒ ಹೆಸರಿನಲ್ಲಿ ಒಂದು ನಕಲಿ / ಖೋಟಾ ಸೇನಾ ಗುರುತಿನ ಚೀಟಿ ಹಾಗೂ ಆರೋಪಿಯಿಂದ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದಾರೆ.
ಪೊಲೀಸರ ಪ್ರಕಾರ, ಆರೋಪಿಯು ಹಲವಾರು ಗುಂಪುಗಳ ಸದಸ್ಯನಾಗಿದ್ದ ಹಾಗೂ ಹಲವಾರು ಇತರ ರಾಷ್ಟ್ರಗಳ ಅಂತರರಾಷ್ಟ್ರೀಯ ವ್ಯಾಟ್ಸ್ ಆ್ಯಪ್ ಸಂಖ್ಯೆಗಳೊಂದಿಗೆ ಸಂಪರ್ಕದಲ್ಲಿದ್ದ.
"ಮೊಬೈಲ್ ಪರೀಕ್ಷಿಸಿದಾಗ ಆರೋಪಿ ಅಂತರರಾಷ್ಟ್ರೀಯ ಸಂಖ್ಯೆಗಳೊಂದಿಗೆ ವೀಡಿಯೊ ಕರೆಗಳನ್ನು ಮಾಡಿದ್ದಾನೆ ಎಂದು ತಿಳಿದುಬಂದಿದೆ" ಎಂದು ಪೊಲೀಸರು ತಿಳಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಮಹಿಳೆಯರ ಗಮನ ಸೆಳೆಯಲು ತಾನು ಭಾರತೀಯ ಸೇನೆಯ ಕ್ಯಾಪ್ಟನ್ ಶೇಖರ್ ಆಗಿ ನಟಿಸುತ್ತಿದ್ದೆ ಎಂದು ವಿಚಾರಣೆಯಲ್ಲಿ ಆರೋಪಿ ಬಹಿರಂಗಪಡಿಸಿದ್ದಾನೆ.
ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 170/419/420/468/471 ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.