2022ರಲ್ಲಿ ಐಎಎಫ್ ಗೆ 36 ರಫೇಲ್ ವಿಮಾನಗಳ ಸೇರ್ಪಡೆ: ಆರ್ಕೆಎಸ್ ಭದೌರಿಯಾ

ದುಂಡಿಗಲ್ (ತೆಲಂಗಾಣ), ಜೂ.19: ಫ್ರಾನ್ಸ್ ನಿಂದ ಪೂರೈಕೆಯಾಗಲಿರುವ 36 ರಫೇಲ್ ಯುದ್ಧವಿಮಾನಗಳನ್ನು 2022ರಲ್ಲಿ ಭಾರತೀಯ ವಾಯುಪಡೆ (ಐಎಎಫ್)ಗೆ ಸೇರ್ಪಡೆಗೊಳಿಸಲಾಗುವುದು ಮತ್ತು ಸೇರ್ಪಡೆ ಪ್ರಕ್ರಿಯೆಯು ನಿಗದಿಯಂತೆ ನಡೆಯುತ್ತಿದೆ ಎಂದು ಪಡೆಯ ಮುಖ್ಯಸ್ಥ ಆರ್ಕೆಎಸ್ ಭದೌರಿಯಾ ಅವರು ಶನಿವಾರ ಇಲ್ಲಿ ತಿಳಿಸಿದರು.
ಏರ್ಫೋರ್ಸ್ ಅಕಾಡೆಮಿಯಲ್ಲಿ ಕಂಬೈನ್ಡ್ ಗ್ರಾಜ್ಯುಯೇಶನ್ ಪರೇಡ್ ಪರಿಶೀಲನೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು 2022ರ ಗುರಿಯನ್ನು ಹೊಂದಿದ್ದು,ನಿಖರವಾಗಿ ಅದರತ್ತ ಸಾಗುತ್ತಿದ್ದೇವೆ. ವಾಸ್ತವದಲ್ಲಿ ಕೆಲವು ವಿಮಾನಗಳು ನಿಗದಿತ ಅವಧಿಗೆ ಮೊದಲೇ ಭಾರತವನ್ನು ತಲುಪಿವೆ. ವಾಯುಪಡೆಯಲ್ಲಿ ರಫೇಲ್ ಸೇರ್ಪಡೆ ಯೋಜನೆಯು ಎಣಿಕೆಯಂತೆಯೇ ಸಾಗುತ್ತಿದೆ ಎಂದು ಹೇಳಿದರು.
ಫ್ರಾನ್ಸ್ ನೊಂದಿಗೆ 59,000 ಕೋ.ರೂ.ಗಳ ಖರೀದಿ ಒಪ್ಪಂದದಡಿ 36 ರಫೇಲ್ ಯುದ್ಧವಿಮಾನಗಳು 2022 ಎಪ್ರಿಲ್ ನಲ್ಲಿ ಭಾರತವನ್ನು ತಲುಪಲಿವೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಈ ಮೊದಲು ಪ್ರಕಟಿಸಿದ್ದರು.
ಪೂರ್ವ ಲಡಾಖ್ ನ ಭಾರತ-ಚೀನಾ ಗಡಿಯಲ್ಲಿನ ಸ್ಥಿತಿಯ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಭದೌರಿಯಾ,ಉಭಯ ದೇಶಗಳ ನಡುವೆ ಮಾತುಕತೆಗಳು ಜಾರಿಯಲ್ಲಿವೆ. ಮಾತುಕತೆಗಳ ಮುಂದುವರಿಕೆ ಮತ್ತು ಬಾಕಿ ಉಳಿದಿರುವ ಸಂಘರ್ಷ ತಾಣಗಳಿಂದ ಸೇನೆಗಳ ಹಿಂದೆಗೆತ ನಮ್ಮ ಮೊದಲ ಪ್ರಯತ್ನವಾಗಲಿದೆ ಎಂದು ಉತ್ತರಿಸಿದರು.