ಕೆನಡಾ: ಒಂಟಾರಿಯೊ ಪ್ರಾಂತ್ಯದ ಸಂಪುಟಕ್ಕೆ ಇಬ್ಬರು ಭಾರತೀಯ ಕೆನಡಿಯನ್ನರ ಸೇರ್ಪಡೆ
ಟೊರೊಂಟೋ, ಜೂ.19: ಕೆನಡಾದ ಒಂಟಾರಿಯೊ ಪ್ರಾಂತ್ಯದಲ್ಲಿ ಸಂಪುಟ ಪುನರ್ರಚಿಸಲಾಗಿದ್ದು ಮತ್ತೆ ಇಬ್ಬರು ಭಾರತೀಯ ಕೆನಡಿಯನ್ನರನ್ನು ಸಚಿವರಾಗಿ ಸೇರ್ಪಡೆಗೊಳಿಸಲಾಗಿದೆ. ಇದರೊಂದಿಗೆ ಸಚಿವ ಸಂಪುಟದಲ್ಲಿ ಭಾರತೀಯ ಕೆನಡಿಯನ್ ಸಮುದಾಯದ 3 ಪ್ರತಿನಿಧಿಗಳು ಸೇರ್ಪಡೆಗೊಂಡಂತಾಗಿದೆ.
ಒಂಟಾರಿಯೊ ಪ್ರಾಂತ್ಯ ಸರಕಾರದ ಮುಖ್ಯಸ್ಥ(ಪ್ರೀಮಿಯರ್) ಡಗ್ ಫೋರ್ಡ್ ಶುಕ್ರವಾರ ಸಂಪುಟವನ್ನು ಪುನರ್ರಚಿಸಿದ್ದು ಈ ಹಿಂದೆ ರಾಜೀನಾಮೆ ನೀಡಿದ್ದ ವಿತ್ತಸಚಿವ ರಾಡ್ ಫಿಲಿಪ್ಸ್ ರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ. ಈ ಹಿಂದಿನ ಸಂಪುಟದಲ್ಲಿ ಸಣ್ಣ ಉದ್ದಿಮೆ ಮತ್ತು ಭ್ರಷ್ಟಾಚಾರ ನಿಯಂತ್ರಣ ಇಲಾಖೆಯ ಸಹಾಯಕ ಸಚಿವರಾಗಿದ್ದ ಭಾರತೀಯ ಕೆನಡಿಯನ್ ಪ್ರಭ್ಮೀತ್ ಸರ್ಕಾರಿಯಾಗೆ ನೂತನ ಸಂಪುಟದಲ್ಲಿ ಭಡ್ತಿ ನೀಡಿದ್ದು ಖಜಾನೆ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಸರ್ಕಾರಿಯಾರ ಹೆತ್ತವರು ಭಾರತದ ಪಂಜಾಬ್ ರಾಜ್ಯದ ಮೂಲದವರಾಗಿದ್ದಾರೆ. ಮತ್ತೊಬ್ಬ ಭಾರತೀಯ ಕೆನಡಿಯನ್ ಪರಮ್ ಗಿಲ್ ಗೆ ಹೊಸದಾಗಿ ರಚಿಸಲಾದ ಪೌರತ್ವ ಮತ್ತು ಬಹುಸಾಂಸ್ಕತಿಕತೆ ಇಲಾಖೆಯ ಹೊಣೆ ವಹಿಸಲಾಗಿದೆ. ಇವರೂ ಪಂಜಾಬ್ ಮೂಲದವರು.