ದಿಲ್ಲಿ:ವೈದ್ಯರ ಮನೆಯಲ್ಲಿ 3,293 ನಕಲಿ ಕಪ್ಪು ಶಿಲೀಂಧ್ರ ಚುಚ್ಚುಮದ್ದು ಪತ್ತೆ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಕಪ್ಪು ಶಿಲೀಂಧ್ರ ಚಿಕಿತ್ಸೆಯಲ್ಲಿ ಬಳಸಲಾಗುವ ಲಿಪೊಸೋಮಲ್ ಆಂಫೊಟೆರಿಸಿನ್-ಬಿ ಚುಚ್ಚುಮದ್ದನ್ನು ತಯಾರಿಸಿ ಮಾರಾಟ ಮಾಡಿದ್ದಕ್ಕಾಗಿ ದಿಲ್ಲಿ ಪೊಲೀಸ್ ಅಪರಾಧ ಶಾಖೆಯಿಂದ ಬಂಧಿಸಲ್ಪಟ್ಟ ಹತ್ತು ಜನರಲ್ಲಿ ಇಬ್ಬರು ವೈದ್ಯರು ಸೇರಿದ್ದಾರೆ. ಆಗ್ನೇಯ ದಿಲ್ಲಿಯ ವೈದ್ಯರಲ್ಲಿ ಒಬ್ಬರಾದ ಡಾ.ಅಲ್ತಮಸ್ ಹುಸೇನ್ ಅವರ ಮನೆಯಿಂದ 3,293 ನಕಲಿ ಚುಚ್ಚುಮದ್ದಿನ ಬ್ಯಾಗ್ ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿಝಾಮುದ್ದೀನ್ ಪಶ್ಚಿಮ ಪ್ರದೇಶದ ಮನೆಯ ಮೇಲೆ ಅಪರಾಧ ಶಾಖೆ ದಾಳಿ ನಡೆಸಿದಾಗ, ನಕಲಿ ಚುಚ್ಚುಮದ್ದಿನ ಬೃಹತ್ ಸಂಗ್ರಹ ಪತ್ತೆಯಾಗಿದೆ.
"ಹೆಚ್ಚಿನ ಚುಚ್ಚುಮದ್ದುಗಳು ಕಪ್ಪು ಶಿಲೀಂಧ್ರಕ್ಕೆ ಚಿಕಿತ್ಸೆ ನೀಡಲು ಬಳಸಲಾಗುತ್ತಿದ್ದವು. ಕೆಲವು ರೆಮ್ಡೆಸಿವಿರ್ ಚುಚ್ಚುಮದ್ದುಗಳಾಗಿವೆ. ಈ ಕೆಲವು ಚುಚ್ಚುಮದ್ದುಗಳ ಅವಧಿಯೂ ಮುಗಿದಿದೆ" ಎಂದು ಅಪರಾಧ ವಿಭಾಗದ ಡಿಸಿಪಿ ಮೋನಿಕಾ ಭಾರದ್ವಾಜ್ ಹೇಳಿದ್ದಾರೆ.
ಈ ದಂಧೆಯಲ್ಲಿ ಭಾಗಿಯಾಗಿರುವ ವೈದ್ಯರ ವೈದ್ಯಕೀಯ ಪದವಿಗಳ ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸಲಿದ್ದಾರೆ.
ನಕಲಿ ಚುಚ್ಚುಮದ್ದಿನ ಬಗ್ಗೆ ದಿಲ್ಲಿ ಸರಕಾರದ ಔಷಧ ನಿಯಂತ್ರಣ ಇಲಾಖೆಯಿಂದ ಜೂನ್ 7 ರಂದು ದೂರು ಸ್ವೀಕರಿಸಿದ ನಂತರ ಪೊಲೀಸ್ ದಾಳಿ ನಡೆದಿದೆ.
ಈ ಗ್ಯಾಂಗ್ 400 ಕ್ಕೂ ಹೆಚ್ಚು ನಕಲಿ ಚುಚ್ಚುಮದ್ದನ್ನು ಮಾರಾಟ ಮಾಡಿತ್ತು. ಅವರು ಪ್ರತಿ ಚುಚ್ಚುಮದ್ದನ್ನು 12,000 ರೂ. ತನಕ ಮಾರಾಟ ಮಾಡುತ್ತಿದ್ದರು.