ಉತ್ತರಪ್ರದೇಶ: ಕೋವಿಡ್ ನಿಯಮ ಧಿಕ್ಕರಿಸಿ ಗಂಗಾಸ್ನಾನಕ್ಕೆ ಗುಂಪು ಸೇರಿದ ಜನತೆ

Photo: ANI
ಲಕ್ನೋ, ಜೂ.20: ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಜಾರಿಗೊಳಿಸಿರುವ ನಿಯಮಗಳನ್ನು ಧಿಕ್ಕರಿಸಿ ಗಂಗಾ ದಸರಾ ಮಹೋತ್ಸವದ ಪ್ರಯುಕ್ತ ಉತ್ತರಪ್ರದೇಶದ ಹಪೂರ್ನ ಬ್ರಜ್ ಘಾಟ್ ನಲ್ಲಿ ಸಾವಿರಾರು ಭಕ್ತರು ಗಂಗಾನದಿಯಲ್ಲಿ ಪುಣ್ಯಸ್ನಾನಕ್ಕೆ ಗುಂಪುಗೂಡಿರುವುದಾಗಿ ವರದಿಯಾಗಿದೆ.
ಉತ್ತರಪ್ರದೇಶದಲ್ಲಿ ಸುಮಾರು ೨ ತಿಂಗಳ ಬಳಿಕ ಅಂಗಡಿ, ಮಾಲ್ ಹಾಗೂ ಹೋಟೆಲ್, ರೆಸ್ಟಾರೆಂಟ್ ಗಳನ್ನು ಜೂ.೨೦ರಿಂದ ಮತ್ತೆ ತೆರೆಯಲು ಸರಕಾರ ಅನುಮತಿ ನೀಡಿದೆ. ಆದರೆ ಧಾರ್ಮಿಕ ಕಾರ್ಯಕ್ರಮಕ್ಕೆ ಅಧಿಕ ಸಂಖ್ಯೆಯಲ್ಲಿ ಜನ ಒಂದೆಡೆ ಗುಂಪುಸೇರುವುದನ್ನು ನಿಷೇಧಿಸಲಾಗಿದೆ. ಹಾಗಿದ್ದರೂ ಹಪೂರ್ ನಲ್ಲಿ ಗಂಗಾಸ್ನಾನಕ್ಕೆ ಭಕ್ತಾದಿಗಳಿಗೆ ಅನುಮತಿ ನೀಡಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ವರದಿ ಹೇಳಿದೆ.
ಸರಕಾರದ ಅನ್ಲಾಕ್ ಮಾರ್ಗಸೂಚಿ ಪ್ರಕಾರ ಯಾವುದೇ ಧಾರ್ಮಿಕ ಸ್ಥಳಗಳಲ್ಲಿ 5ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ. ಇದರ ಅನ್ವಯ, ಗಂಗಾ ದಸರಾ ಸಂದರ್ಭ ಗಂಗಾನದಿಯಲ್ಲಿ ಪವಿತ್ರಸ್ನಾನವನ್ನು ನಿಷೇಧಿಸಲಾಗಿದೆ ಎಂದು ಹಾಪುರ್ ಜಿಲ್ಲಾನ್ಯಾಯಾಧೀಶರ ಆದೇಶದಲ್ಲಿ ಸೂಚಿಸಲಾಗಿದೆ.
ಅನ್ಲಾಕ್ ಪ್ರಕ್ರಿಯೆ ಹಂತಹಂತವಾಗಿ ನಡೆಯಬೇಕು. ಒಮ್ಮೆಲೇ ಎಲ್ಲಾ ಚಟುವಟಿಕೆಗಳಿಗೆ ಅವಕಾಶ ನೀಡಿದರೆ ಕೊರೋನ ಸೋಂಕಿನ ೩ನೇ ಅಲೆ ನಿರೀಕ್ಷಿಸಿದ್ದಕ್ಕಿಂತಲೂ ತುಂಬಾ ಬೇಗ ಅಪ್ಪಳಿಸಲಿದೆ ಎಂದು ವೈದ್ಯರು ಮತ್ತು ಆರೋಗ್ಯತಜ್ಞರು ಎಚ್ಚರಿಕೆ ನೀಡಿದ್ದಾರೆ. ಸಾಮಾನ್ಯವಾಗಿ ಸೋಂಕಿನ ೩ನೇ ಅಲೆ ಸುಮಾರು ೩ ತಿಂಗಳ ಬಳಿಕ ಅಪ್ಪಳಿಸುತ್ತದೆ. ಆದರೆ ನಿರ್ಬಂಧಗಳನ್ನು ಸಡಿಲಿಸಿದ ಬಳಿಕ ಭಾರತದಲ್ಲಿ ಕೋವಿಡ್-19 ಸೋಂಕಿನ ಕುರಿತ ಮುನ್ನೆಚ್ಚರಿಕೆಯ ಬಗ್ಗೆ ನಿರ್ಲಕ್ಷ್ಯ ತೋರಲಾಗುತ್ತಿದೆ. ಜನರು ಇದೇ ರೀತಿ ಗುಂಪುಗೂಡುವುದನ್ನು ಮುಂದುವರಿಸಿದರೆ ಸೋಂಕಿನ 3ನೇ ಅಲೆ ಮುಂದಿನ 6-8 ವಾರದಲ್ಲಿ ದೇಶಕ್ಕೆ ಅಪ್ಪಳಿಸುವುದನ್ನು ತಪ್ಪಿಸಲಾಗದು ಎಂದು ಅಖಿಲ ಭಾರತ ವೈದ್ಯವಿಜ್ಞಾನ ಸಂಸ್ಥೆ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಎಚ್ಚರಿಸಿದ್ದಾರೆ.