ಮಲೇರಿಯಾ, ಡೆಂಗಿ, ಚಿಕುನ್ ಗುನ್ಯಾ ರೋಗಗಳ ನಿಯಂತ್ರಣಕ್ಕೆ ಮುಂದಾಗಿ: ದ.ಕ. ಜಿಲ್ಲಾಧಿಕಾರಿ

ಮಂಗಳೂರು, ಜೂ.21: ಮಲೇರಿಯಾ, ಡೆಂಗಿ, ಚಿಕುನ್‌ಗುನ್ಯಾ ಸಹಿತ ಎಲ್ಲಾ ರೀತಿಯ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ದ.ಕ.ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಸೂಚನೆ ನೀಡಿದರು.
ಮಲೇರಿಯಾ, ಡೆಂಗಿ ಮತ್ತಿತರ ರೋಗಗಳ ನಿಯಂತ್ರಣಕ್ಕೆ ಸಂಬಂಧಿಸಿ ದ.ಕ.ಜಿಲ್ಲಾಧಿಕಾರಿಯ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಮುಂಗಾರು ಮಳೆ ಆರಂಭಗೊಂಡಿದೆ. ಮಳೆ ನೀರು ಅಲ್ಲಲ್ಲಿ ನಿಂತು ಸೊಳ್ಳೆ ಉತ್ಪತ್ತಿ ಹೆಚ್ಚಾಗಿ ಮಲೇರಿಯಾ, ಡೆಂಗಿ, ಚಿಕುನ್‌ಗುನ್ಯಾ ಸಹಿತ ಸಾಂಕ್ರಾಮಿಕ ರೋಗಗಳು ಹರಡುವ ಸಂಭವವಿದೆ. ಹಾಗಾಗಿ ಸಾರ್ವಜನಿಕರಲ್ಲಿ ಸೊಳ್ಳೆಗಳ ನಿಯಂತ್ರಣ ಹಾಗೂ ಆರೋಗ್ಯ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಬೇಕು. ಅನಾಫಿಲೀಸ್, ಈಡಿಸ್ ಮತ್ತು ಕೊಲೆಕ್ಸ್ ಎಂಬ ಸೊಳ್ಳೆಗಳಿಂದ ಮಲೇರಿಯಾ, ಡೆಂಗಿ, ಚಿಕುನ್‌ಗುನ್ಯಾ, ಆನೆಕಾಲು ರೋಗ, ಮೆದುಳು ಜ್ವರದಂತ ರೋಗಗಳು ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಮನೆಯ ಸುತ್ತಮುತ್ತಲಿನ ಪರಿಸರವನ್ನು ಸಾರ್ವಜನಿಕರು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ ಜನವರಿಯಿಂದ ಈವರೆಗೆ 277 ಪ್ರಕರಣಗಳು ನಗರ ಪ್ರದೇಶಗಳಲ್ಲಿ ಹಾಗೂ ಗ್ರಾಮೀಣ ಭಾಗದಲ್ಲಿ 22 ಮಲೇರಿಯಾ ಪ್ರಕರಣಗಳು ದಾಖಲಾಗಿದೆ. 104 ಡೆಂಗಿ ಪ್ರಕರಣಗಳು ಕಂಡುಬಂದಿದೆ. ಜನರಲ್ಲಿ ಜ್ವರದ ಪ್ರಕರಣಗಳು ಕಂಡುಬಂದಲ್ಲಿ ಕಡ್ಡಾಯವಾಗಿ ಮಲೇರಿಯಾ ರಕ್ತ ಪರೀಕ್ಷೆ ಮಾಡಿಸಬೇಕು. ನಗರದ ಬಂದರು, ಬೆಂಗ್ರೆ, ಜೆಪ್ಪು, ಲೇಡಿಹಿಲ್, ಪಡೀಲ್, ಎಕ್ಕೂರು, ಶಕ್ತಿನಗರ, ಕುಳಾಯಿ, ಸುರತ್ಕಲ್ ಪ್ರದೇಶಗಳಲ್ಲಿ ಹೆಚ್ಚು ಮಲೇರಿಯಾ/ಡೆಂಗಿ ಪ್ರಕರಣಗಳು ಕಂಡುಬಂದಿವೆ. ಈ ಬಗ್ಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕು ಎಂದು ಡಿಸಿ ಹೇಳಿದರು.
ಸಭೆಯಲ್ಲಿ ಜಿಪಂ ಸಿಇಒ ಡಾ.ಕುಮಾರ್, ಮನಪಾ ಆಯುಕ್ತ ಅಕ್ಷಯ್ ಶ್ರೀಧರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಶ್ರಿತ ರೋಗಿಗಳ ನಿಯಂತ್ರಣಾಧಿಕಾರಿ ಡಾ.ನವೀನ್‌ಚಂದ್ರ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.







