ಸಮುದ್ರ ಮಟ್ಟ ಏರಿಕೆಯಿಂದ ಲಕ್ಷದ್ವೀಪ ದ್ವೀಪ ಸಮೂಹಗಳಿಗೆ ಅಪಾಯ: ಐಐಟಿ ಖರಗ್ಪುರ್ ಅಧ್ಯಯನ ವರದಿ

photo: twitter/juhiosingh
ಹೊಸದಿಲ್ಲಿ: ಲಕ್ಷದ್ವೀಪ ಸುತ್ತಲಿನ ಸಮುದ್ರದ ಮಟ್ಟ ವಾರ್ಷಿಕ ಅಂದಾಜು 0.44 ಎಂಎಂ ನಿಂದ 0.9 ಎಂಎಂ ತನಕ ಏರಿಕೆಯಾಗಬಹುದು ಹಾಗೂ ಇದರಿಂದ ಹಲವಾರು ದ್ವೀಪಗಳಲ್ಲಿ ಕಡಲ್ಕೊರೆತ ಸಂಭವಿಸಿ ಸಣ್ಣ ದ್ವೀಪಗಳು ಪ್ರಾಯಶಃ ಮುಳುಗಬಹುದು ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಧೀನದಲ್ಲಿ ಐಐಟಿ-ಖರಗ್ಪುರ್ ಇಲ್ಲಿನ ವಿಜ್ಞಾನಿಗಳು ನಡೆಸಿದ ಸಂಶೋಧನೆ ಕಂಡುಕೊಂಡಿದೆ.
ಅರಬ್ಬೀ ಸಾಗರದಲ್ಲಿರುವ ಲಕ್ಷದ್ವೀಪ ದ್ವೀಪಸಮೂಹದಲ್ಲಿ 36 ದ್ವೀಪಗಳಿವೆ ಹಾಗೂ ಇವುಗಳ ವಿಸ್ತಾರ 32 ಚದರ ಕಿಮೀ ಆಗಿದೆ. ಈ ದ್ವೀಪಸಮೂಹಗಳ ನೆಲ ಮಟ್ಟ ಸಮುದ್ರ ಮಟ್ಟಕ್ಕಿಂತ ಗರಿಷ್ಠ ನಾಲ್ಕರಿಂದ ಆರು ಮೀಟರ್ ಎತ್ತರ ಹಾಗೂ ಕನಿಷ್ಠ ನೆಲ ಮಟ್ಟ ಒಂದು ಮೀಟರಿಗಿಂತಲೂ ಕಡಿಮೆಯಿದೆ.
ಈ ದ್ವೀಪಸಮೂಹದ 10 ದ್ವೀಪಗಳಲ್ಲಿ ಮಾತ್ರ ಜನವಸತಿಯಿದ್ದು ಇಲ್ಲಿಯೇ ವಿಜ್ಞಾನಿಗಳು ಅಧ್ಯಯನ ನಡೆಸಿದ್ದರು.
ಸಮುದ್ರದ ಮಟ್ಟ ಏರಿಕೆಯಾದಾಗ ಕೆಲ ದ್ವೀಪಗಳು ಹೆಚ್ಚು ಹಾಗೂ ಇನ್ನು ಕೆಲ ದ್ವೀಪಗಳು ಕಡಿಮೆ ಬಾಧಿತವಾಗಬಹುದಾದರೂ ಬಹುತೇಕ ಎಲ್ಲಾ ದ್ವೀಪಗಳೂ ಸಮುದ್ರ ಮಟ್ಟದ ಏರಿಕೆಯಿಂದ ಬಾಧಿತವಾಗಲಿವೆ ಎಂದು ಅಧ್ಯಯನ ತಿಳಿಸಿದೆ.
ಈ ಅಧ್ಯಯನದ ಪ್ರಕಾರ ಚೆಟ್ಲಟ್ ಮತ್ತು ಅಮಿನಿ ದ್ವೀಪಗಳು ಗರಿಷ್ಠ ಭೂಮಿ ಕಳೆದುಕೊಳ್ಳಲಿವೆ ಹಾಗೂ ಅಮಿನಿಯಲ್ಲಿನ ಸಮುದ್ರ ತೀರ ಶೇ60ರಿಂದ ಶೇ70ರಷ್ಟು ನಷ್ಟವಾಗಲಿದ್ದರೆ ಚೆಟ್ಲಟ್ನಲ್ಲಿನ ಸಮುದ್ರ ತೀರ 70ರಿಂದ 80ಶೇಕಡಾದಷ್ಟು ನಷ್ಟ ಅನುಭವಿಸಲಿದೆ. ಮಿನಿಕಾಯ್ ದ್ವೀಪ ಮತ್ತು ರಾಜಧಾನಿ ಕವರತ್ತಿ ಕೂಡ ಈಗಿನ ತೀರದ ಶೇ60ರಷ್ಟುನ್ನು ಕಳೆದುಕೊಳ್ಳಬಹುದು ಹಾಗೂ ಅಗತ್ತಿ ದ್ವೀಪ ದಕ್ಷಿಣದ ತುದಿಯಲ್ಲಿರುವ ದ್ವೀಪಸಮೂಹದ ಏಕೈಕ ವಿಮಾನ ನಿಲ್ದಾಣ ಕೂಡ ಮುಳುಗಡೆಯಿಂದ ಸಾಕಷ್ಟು ಹಾನಿ ಅನುಭವಿಸಲಿದೆ ಎಂದು ಅಧ್ಯಯನ ಕಂಡುಕೊಂಡಿದೆ.
ಸಂಶೋಧನಾ ವರದಿಯು ರೀಜನಲ್ ಸ್ಟಡೀಸ್ ಇನ್ ಮೆರೈನ್ ಸಾಯನ್ಸ್' ಜರ್ನಲ್ನಲ್ಲಿ ಪ್ರಕಟಗೊಂಡಿದೆ.