"ಕೋವಿಡ್ ಸೋಂಕಿಗೆ ತುತ್ತಾಗಿದ್ದೆ": ತಮ್ಮ ಎರಡು ತಿಂಗಳು ಗೈರಿಗೆ ಕಾರಣ ನೀಡಿದ ಅರ್ನಬ್ ಗೋಸ್ವಾಮಿ

ಹೊಸದಿಲ್ಲಿ : ಸುಮಾರು ಎರಡು ತಿಂಗಳು ರಿಪಬ್ಲಿಕ್ ಟಿವಿಯಿಂದ ಮರೆಯಾಗಿದ್ದ ಅದರ ಸ್ಥಾಪಕ ಮತ್ತು ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ ಕೊನೆಗೂ ತಮ್ಮ ಅನುಪಸ್ಥಿತಿಯ ರಹಸ್ಯ ಬಿಚ್ಚಿಟ್ಟಿದ್ದಾರೆ. ಸೋಮವಾರ ರಾತ್ರಿ ತಮ್ಮ ಪ್ರೈಮ್ ಟೈಮ್ ಟಿವಿ ಡಿಬೇಟ್ ಮತ್ತೆ ಆರಂಭಿಸಿದ ಅರ್ನಬ್, ತಾವು ಕೋವಿಡ್-19 ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದುದಾಗಿ ಮಾಹಿತಿ ನೀಡಿದ್ದಾರೆ.
"ನಾನೇಕೆ ದೂರವಿದ್ದೆ ಎಂಬುದರ ಕುರಿತು ಮೊದಲು ನಿಮಗೆ ಹೇಳುತ್ತೇನೆ. ಅಥವಾ ನಾನು ಅನಿವಾರ್ಯವಾಗಿ ದೂರ ಉಳಿಯಬೇಕಾಯಿತು ಎನ್ನಬೇಕೇ? ಇಲ್ಲ, ನಾನೇನೂ ದೀರ್ಘ ರಜೆ ಮೇಲೆ ಹೋಗಿರಲಿಲ್ಲ, ನಾನು ವಿದೇಶಕ್ಕೂ ಪ್ರಯಾಣಿಸಲಿಲ್ಲ. ಎಪ್ರಿಲ್ ಅಂತ್ಯ ಹಾಗೂ ಮೇ ಪ್ರಥಮಾರ್ಧ, ಹೆಚ್ಚುಕಡಿಮೆ ಮೇ ತಿಂಗಳ ಹೆಚ್ಚಿನ ದಿನಗಳಲ್ಲಿ ನಾನು ಕೋವಿಡ್ ವಿರುದ್ಧ ಹೋರಾಡಿದ್ದೆ. ನಿಮ್ಮಲ್ಲಿ ಹಲವರಿಗೆ ಆದಂತೆ ಈ ವೈರಸ್ ನನ್ನ ದೇಹವನ್ನು ಪರೀಕ್ಷಿಸಿದೆ," ಎಂದು ಅವರು ಹೇಳಿದ್ದಾರೆ.
ತಾವು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾಗಿ ಹಾಗೂ ಡಿಸ್ಚಾರ್ಜ್ ಆದ ನಂತರ ವೈದ್ಯರ ಕಟ್ಟುನಿಟ್ಟಿನ ಸೂಚನೆ ಮೇರೆಗೆ ವಿಶ್ರಾಂತಿ ಪಡೆದಿದ್ದಾಗಿ ತಿಳಿಸಿದ ಅವರು ಈಗ ತಾವು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾಗಿ ಹಾಗೂ ಪ್ರತಿ ರಾತ್ರಿ ಟಿವಿ ಕಾರ್ಯಕ್ರಮದಲ್ಲಿ ತಮ್ಮ ಅಭಿಮಾನಿಗಳ ಜತೆಗೆ ತಪ್ಪದೇ ಇರಲು ಸಿದ್ಧವಿರುವುದಾಗಿಯೂ ಅವರು ಹೇಳಿಕೊಂಡರು.
"ನಿಮ್ಮೆಲ್ಲರ ಪ್ರೀತಿ ವಿಶ್ವಾಸಗಳೊಂದಿಗೆ ರಿಪಬ್ಲಿಕ್ ವಾಹಿನಿಯನ್ನು ಆದಷ್ಟು ಹೆಚ್ಚು ಭಾಷೆಗಳಲ್ಲಿ ಹೊರತರುತ್ತೇನೆ" ಅವರು ಹೇಳಿದ್ದಾರೆ. ಅವರು ಟಿವಿ ಕಾರ್ಯಕ್ರಮಗಳಲ್ಲಿ ಕಳೆದೆರಡು ತಿಂಗಳಲ್ಲಿ ಕಾಣಿಸಿಕೊಳ್ಳದೇ ಇದ್ದಾಗ ಅವರ ಆರೋಗ್ಯದ ಕುರಿತು ಊಹಾಪೋಹಗಳು ಹರಡಿದ್ದವು.
ಪಶ್ಚಿಮ ಬಂಗಾಳ ಚುನಾವಣೆಯ ಮತ ಎಣಿಕೆಯ ದಿನ ಅವರು ಕೊನೆಯ ಬಾರಿ ಟಿವಿಯಲ್ಲಿ ಕಾಣಿಸಿಕೊಂಡಿದ್ದರಲ್ಲದೆ ಟಿಎಂಸಿ ಗೆಲುವು ಸಾಧಿಸಲಿದೆ ಎಂಬುದು ಸ್ಪಷ್ಟವಾಗುತ್ತಿದ್ದಂತೆಯೇ ಮರೆಯಾಗಿದ್ದರು ಎಂದು ವರದಿ ಉಲ್ಲೇಖಿಸಿದೆ.
#ArnabIsBack | Being on air at 9 pm is a part of my life. It is like returning home to me: Arnab Goswami #LIVE on Republic TV; Tune in to watch here - https://t.co/rGQJsiKgt2 pic.twitter.com/UZ2z4cHvMt
— Republic (@republic) June 21, 2021