‘ಸೆಲ್ಯೂಟ್ ಕೋವಿಡ್ ವಾರಿಯರ್ಸ್’ ಸಾಕ್ಷ್ಯಚಿತ್ರ ಬಿಡುಗಡೆ
ಮಂಗಳೂರು, ಜೂ. 22: ಕೊರೋನ 2ನೆ ಅಲೆ ಸಂದರ್ಭದಲ್ಲಿ ಕೊರೋನ ವಾರಿಯರ್ಸ್‌ಗಳಾಗಿ ಕಾರ್ಯನಿರ್ವಹಿಸುತ್ತಿರುವ ಪೊಲೀಸರ ಕಾರ್ಯ ಚಟವಟಿಕೆಗಳ ಕುರಿತಂತೆ ಮಂಗಳೂರು ಪೊಲೀಸ್ ಕಮಿಷನರೇಟ್ ವತಿಯಿಂದ ರಚಿಸಲಾಗಿರುವ ಸೆಲ್ಯೂಟ್ ಕೋವಿಡ್ ವಾರಿಯರ್ಸ್ ಸಾಕ್ಷಚಿತ್ರವನ್ನು ಇಂದು ಬಿಡುಗಡೆಗೊಳಿಸಾಯಿತು.
ಕಾವೂರು ಠಾಣೆಯಲ್ಲಿ ಹೆಡ್‌ಕಾನ್‌ಸ್ಟೇಬಲ್ ಆಗಿರುವ ಗೋಪಾಲಕೃಷ್ಣ ಕೆ. ಈ ಸಾಕ್ಷಚಿತ್ರದ ಹಾಡು ಹಾಡಿರುವುದಲ್ಲದೆ, ರಾಬಿನ್ ರೈ ಜತೆ ಸಾಕ್ಷ ಚಿತ್ರದ ನಿರ್ದೇಶನಕ್ಕೂ ಸಾಥ್ ನೀಡಿದ್ದಾರೆ. ಈ ಸಾಕ್ಷ ಚಿತ್ರ 3 ನಿಮಿಷಗಳಾಗಿದ್ದು, ಕೊರೋನ ನಿಯಂತ್ರಣ ಕಾರ್ಯದಲ್ಲಿ ಪೊಲೀಸರು ತಮ್ಮನ್ನು ಹೇಗೆ ತೊಡಗಿಸಿಕೊಂಡಿದ್ದಾರೆಂಬುದನ್ನು ಹಿನ್ನೆಲೆ ಹಾಡಿನೊಂದಿಗೆ ವೀಡಿಯೋ ಮೂಲಕ ಬಿಂಬಿಸಲಾಗಿದೆ.
‘ಹಗಲಲ್ಲೂ, ಇರುಳಲ್ಲೂ, ಮಳೆಯಲ್ಲೂ ಬಿಸಿಲಲ್ಲೂ ಕರ್ತವ್ಯವೇ ಕಾಯಕ’ ಎಂಬ ಸಾಹಿತ್ಯದ ಹಾಡಿನೊಂದಿಗೆ ಸಾಗುವ ಈ ಸಾಕ್ಷ ಚಿತ್ರವು ‘ವಿ ಆರ್ ವಿದ್ ಯು ಕೋವಿಡ್ ವಾರಿಯರ್ಸ್’ ಎಂಬ ಸಂದೇಶವನ್ನು ಸಾರ್ವಜನಿಕರಿಗೆ ನೀಡಿದೆ.ಸಂದೇಶ್ ಬಾಬಣ್ಣ ಸಂಗೀತ, ಸಹಗಾಯಕರಾಗಿ ವಿಶ್ವಾಸ್ ಗುರುಪುರ, ಸಂದೇಶ್ ಬಾಬಣ್ಣ, ಛಾಯಾಗ್ರಹಣ ಕೀರ್ತನ್ ದೇವಾಡಿಗ ಮತ್ತು ಜೆ. ಬಂಗೇರಾ, ಎಡಿಟಿಂಗ್ ಶಿವರಾಜ್ ಕುತ್ತೆತ್ತೂರು, ಸಾಹಿತ್ಯ ವಿಜೇಶ್ ದೇವಾಡಿಗ ಮಾಡಿದ್ದಾರೆ.
ದಿನನಿತ್ಯದ ಕೆಲಸದ ಒತ್ತಡದ ನಡುವೆ ಈ ಕ್ರಿಯಾತ್ಮಕ ಕಾರ್ಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಪ್ರೋತ್ಸಾಹ ನೀಡುವಂತಿದೆ ಎಂದು ಸಾಕ್ಷಚಿತ್ರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಗೋಪಾಲ ಕೃಷ್ಣ ಹಾಗೂ ತಂಡವನ್ನು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅಭಿನಂದಿಸಿದರು.







